ವಾಯುಪಡೆ ವಿಮಾನ ಹಾರ್ಡ್ ಲ್ಯಾಂಡಿಂಗ್: ಪುಣೆ ವಿಮಾನ ನಿಲ್ದಾಣ ತಾತ್ಕಾಲಿಕ ಬಂದ್

PC: x.com/htTweets
ಪುಣೆ: ಭಾರತೀಯ ವಾಯುಪಡೆ ವಿಮಾನವೊಂದು ಪುಣೆ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಹಾರ್ಡ್ ಲ್ಯಾಂಡಿಂಗ್ ಆಗಿರುವ ಘಟನೆ ಬೆನ್ನಲ್ಲೇ ಪುಣೆ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನ ಕಾರ್ಯಾಚರಣೆಯನ್ನು ಶೀಘ್ರ ಯಥಾಸ್ಥಿತಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಾಯುಪಡೆ ಎಕ್ಸ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದೆ.
ಭಾರತೀಯ ವಾಯುಪಡೆ ಈ ಘಟನೆಯನ್ನು ಜಾಲತಾಣ ಪೋಸ್ಟ್ ನಲ್ಲಿ ದೃಢಪಡಿಸಿದೆ. "ಐಎಎಫ್ ವಿಮಾನದ ಘಟನೆಯಿಂದಾಗಿ ಪುಣೆ ವಿಮಾನ ನಿಲ್ದಾಣದ ರನ್ ವೇ ತಾತ್ಕಾಲಿಕವಾಗಿ ಲಭ್ಯವಿಲ್ಲ. ವಿಮಾನದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಹಾಗೂ ಆಸ್ತಿಪಾಸ್ತಿಗೆ ಯಾವುದೇ ಹಾನಿಯಾಗಿಲ್ಲ" ಎಂದು ವಾಯುಪಡೆ ಹೇಳಿದೆ. ರನ್ ವೇ ಕಾರ್ಯಾಚರಣೆಯನ್ನು ಪುನರಾರಂಭಿಸಲು ಮತ್ತು ಸಾಮಾನ್ಯ ಸೇವೆ ಪುನಾರಂಭಕ್ಕೆ ಪ್ರಯತ್ನ ನಡೆದಿದೆ ಎಂದು ವಿವರಿಸಿದೆ.
ಐಎಎಫ್ ವಿಮಾನ ಹಾರ್ಡ್ ಲ್ಯಾಂಡಿಂಗ್ ಆಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.
ವಾಯುಪಡೆದ ಯುದ್ಧವಿಮಾನವೊಂದು ರಾತ್ರಿ 10.25ರ ವೇಳೆಗೆ ಲ್ಯಾಂಡಿಂಗ್ ಸಂದರ್ಭದಲ್ಲಿ ಲ್ಯಾಂಡಿಂಗ್ ಗೇರ್ ವಿಫಲವಾದ ಹಿನ್ನೆಲೆಯಲ್ಲಿ ಹಾರ್ಡ್ ಲ್ಯಾಂಡಿಂಗ್ ಆಗಿದ್ದು, ರನ್ ವೇಯಲ್ಲಿ ತಡೆ ಉಂಟಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಯೊಬ್ಬರು ಹೇಳಿದ್ದಾರೆ. ಏರ್ ಟ್ರಾಫಿಕ್ ಕಂಟ್ರೋಲ್ ಮಾಹಿತಿಯ ಪ್ರಕಾರ, ರನ್ ವೇ ತೆರವುಗೊಳಿಸಿ ಕಾರ್ಯಾಚರಣೆ ಪುನರಾರಂಭಿಸಲು ನಾಲ್ಕರಿಂದ ಐದು ಗಂಟೆಯ ಅವಧಿ ತಗುಲುವ ಸಾಧ್ಯತೆ ಇದೆ.
ಪರಿಣಾಮವಾಗಿ ಪುಣೆಗೆ ಆಗಮಿಸುತ್ತಿದ್ದ ಕನಿಷ್ಠ ಎಂಟು ವಿಮಾನಗಳನ್ನು ಸೂರತ್, ಗೋವಾ, ನವಿ ಮುಂಬೈ, ಚೆನ್ನೈ ಹಾಗೂ ಕೊಯಮತ್ತೂರಿಗೆ ವಿಮುಖಗೊಳಿಸಲಾಗಿದೆ. ಮಾರ್ಗ ಬದಲಿಸಿದ ಕಾರಣದಿಂದ ಪ್ರಯಾಣಿಕರು ಪರದಾಡುವಂತಾಯಿತು.






