Air India ವಿಮಾನ ದುರಂತ ಕುರಿತು ತನಿಖೆಯು ಅಂತಿಮ ಹಂತದಲ್ಲಿದೆ: ಸುಪ್ರೀಂ ಕೋರ್ಟ್ಗೆ ಕೇಂದ್ರ ಸರಕಾರ ಮಾಹಿತಿ

Photo: Reuters
ಹೊಸದಿಲ್ಲಿ: 2025ರಲ್ಲಿ ಗುಜರಾತ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ AI-171 ಪತನಕ್ಕೆ ಸಂಬಂಧಿಸಿದ ತನಿಖೆಯು "ಅಂತಿಮ ಹಂತದಲ್ಲಿದೆ" ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈ ವೇಳೆ ತನಿಖೆಯನ್ನು ಪೂರ್ಣಗೊಳಿಸಲು ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಎರಡು ವಾರಗಳ ಕಾಲಾವಕಾಶ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ವಿಮಾನ ದುರಂತದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಮೃತ ಪೈಲಟ್ ಓರ್ವರ ತಂದೆ ಮತ್ತು ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್ ಎಂಬ ಎನ್ಜಿಒ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಮುಂದೂಡಿದೆ. ನಾವು ಈ ಬಗ್ಗೆ ಎರಡು ವಾರಗಳ ನಂತರ ವಿಚಾರಣೆಗೆ ಪಟ್ಟಿ ಮಾಡುತ್ತೇವೆ ಎಂದು ಪೀಠವು ಹೇಳಿದೆ.
"ನಾವು ತನಿಖೆಯ ಅಂತಿಮ ಹಂತದಲ್ಲಿದ್ದೇವೆ. ನ್ಯಾಯಾಲಯವು ಎರಡು ಅಥವಾ ಮೂರು ವಾರಗಳ ನಂತರ ಇದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು" ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.
ಈ ವೇಳೆ ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ವಿಚಾರಣೆಯನ್ನು ಮುಂದೂಡಬೇಕೆಂಬ ಸರಕಾರದ ಮನವಿಯನ್ನು ವಿರೋಧಿಸಿದರು. ಜುಲೈ ತಿಂಗಳಲ್ಲಿ ಕೇಂದ್ರ ಸರಕಾರ ನ್ಯಾಯಾಲಯಕ್ಕೆ ಪ್ರಮಾಣಪತ್ರವೊಂದನ್ನು ಸಲ್ಲಿಸಿ, AAIB ಅಕ್ಟೋಬರ್ ಮೊದಲ ವಾರದೊಳಗೆ ತನ್ನ ಅಂತಿಮ ವರದಿಯ ಕರಡನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ತಿಳಿಸಿತ್ತು ಎಂದು ಹೇಳಿದರು.
"ವಿಳಂಬವು ಉದ್ದೇಶಪೂರ್ವಕವಲ್ಲ, ಇಂತಹ ಪ್ರಕರಣಗಳಲ್ಲಿ ಜಾಗತಿಕ ಪ್ರೋಟೋಕಾಲ್ಗಳನ್ನು ಪಾಲಿಸಬೇಕಾಗುತ್ತದೆ. ವರದಿಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುವ ಯಾವುದೇ ಉದ್ದೇಶವಿಲ್ಲ" ಎಂದು ತುಷಾರ್ ಮೆಹ್ತಾ ಈ ವೇಳೆ ಸ್ಪಷ್ಟಪಡಿಸಿದರು.
2025ರ ಜೂನ್ 12ರಂದು ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ (AI-171) ಅಹ್ಮದಾಬಾದ್ನಿಂದ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ ಒಟ್ಟು 260 ಜನರು ಮೃತಪಟ್ಟಿದ್ದರು.







