ಇಂಧನ ದರ ಏರಿಕೆ | ದೇಶೀಯ ವಿಮಾನಗಳ ಹಾರಾಟ ಕಡಿತಗೊಳಿಸಲಿರುವ Air India, IndiGo; ವರದಿ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ಜೂನ್ ತಿಂಗಳಿಂದ ಸುಮಾರು 250 ದೈನಂದಿನ ದೇಶೀಯ ವಿಮಾನಗಳ ಹಾರಾಟವನ್ನು ಕಡಿತಗೊಳಿಸುತ್ತಿರುವ ಬಗ್ಗೆ ವರದಿಯಾಗಿದೆ. ಇಂಧನ ದರ ಏರಿಕೆ ಮತ್ತು ಪ್ರಯಾಣ ಬೇಡಿಕೆ ಕುಂಠಿತವಾಗಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು indiatoday.in ವರದಿ ಮಾಡಿದೆ.
ಜೂನ್ನಿಂದ ಆಗಸ್ಟ್ವರೆಗೆ ವಿಮಾನ ಹಾರಾಟಗಳ ಕಡಿತ ಮುಂದುವರಿಯುವ ಸಾಧ್ಯತೆ ಇದೆ. ವಿಮಾನ ಟಿಕೆಟ್ ದರಗಳು ಗಣನೀಯವಾಗಿ ಏರಿಕೆಯಾಗಿರುವ ಸಂದರ್ಭದಲ್ಲೇ ಈ ಕ್ರಮ ಜಾರಿಗೆ ಬಂದಿದೆ. ಬೇಸಿಗೆ ರಜೆ ಅವಧಿಯಲ್ಲೇ ವಿಮಾನಯಾನ ಸಂಸ್ಥೆಗಳು ತೆಗೆದುಕೊಂಡಿರುವ ಈ ಕ್ರಮವು ದೇಶೀಯ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಜೂನ್ ಹಾಗೂ ಜುಲೈ ತಿಂಗಳಲ್ಲಿ ಏರ್ ಇಂಡಿಯಾ ದೇಶೀಯ ವಿಮಾನಗಳ ಸೇವೆಯಲ್ಲಿ ಸುಮಾರು 22% ಕಡಿತಗೊಳಿಸುತ್ತಿದೆ. ಪ್ರಸ್ತುತ ಸಂಸ್ಥೆಯು ದೈನಂದಿನವಾಗಿ ಸುಮಾರು 500 ದೇಶೀಯ ವಿಮಾನಗಳ ಹಾರಾಟ ನಡೆಸುತ್ತಿದೆ. ಈ ಕಡಿತದಿಂದ ದೈನಂದಿನವಾಗಿ ಸುಮಾರು 110 ವಿಮಾನಗಳ ಸೇವೆ ಸ್ಥಗಿತಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಸುಮಾರು 2,200 ದೈನಂದಿನ ವಿಮಾನಗಳನ್ನು ನಡೆಸುವ ಇಂಡಿಗೋ, ತನ್ನ ದೇಶೀಯ ವಿಮಾನಗಳ ಹಾರಾಟದಲ್ಲಿ 5 ರಿಂದ 7% ಕಡಿತಗೊಳಿಸುತ್ತಿದೆ, ಇದರ ಪರಿಣಾಮವಾಗಿ ದಿನಕ್ಕೆ ಸುಮಾರು 110 ವಿಮಾನಗಳ ಹಾರಾಟ ಸ್ಥಗಿತಗೊಳ್ಳಲಿದೆ ಎಂದು ವರದಿಯಾಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಪ್ರತಿದಿನ ಸುಮಾರು 340 ದೇಶೀಯ ವಿಮಾನಗಳಲ್ಲಿ ಸುಮಾರು 10% ಹಾರಾಟವನ್ನು ಕಡಿತಗೊಳಿಸುತ್ತಿದೆ ಎಂದು ವರದಿಯಾಗಿದೆ.






