‘ಆಪರೇಷನ್ ಸಿಂಧೂರ್’ ಪರಿಣಾಮ: ತುರ್ಕಿಯಾದ ವಿಮಾನ ನಿರ್ವಹಣೆ ಸಂಸ್ಥೆಯನ್ನು ಕೈಬಿಡಲು ಏರ್ ಇಂಡಿಯಾ ಸಜ್ಜು

ಏರ್ ಇಂಡಿಯಾ ವಿಮಾನ | PC : PTI
ಹೊಸದಿಲ್ಲಿ: ತನ್ನ ಬೋಯಿಂಗ್ 777 ವಿಮಾನಗಳ ರಿಪೇರಿ ಸೇರಿದಂತೆ ಸಮಗ್ರ ನಿರ್ವಹಣೆ ಕಾರ್ಯಗಳನ್ನು ನೋಡಿಕೊಳ್ಳುತ್ತಿರುವ ಪ್ರಮುಖ ಜಾಗತಿಕ ವಾಯುಯಾನ ಸೇವಾ ಪೂರೈಕೆದಾರ ಟರ್ಕಿಷ್ ಟೆಕ್ನಿಕ್ ಜೊತೆ ತನ್ನ ಸಂಬಂಧಕ್ಕೆ ಅಂತ್ಯ ಹಾಡಲು ಏರ್ ಇಂಡಿಯಾ ಸಜ್ಜಾಗಿದೆ.
ಟರ್ಕಿಷ್ ಟೆಕ್ನಿಕ್ ಜೊತೆ ಸಂಬಂಧ ಕಡಿದುಕೊಳ್ಳುವುದನ್ನು ಸುದ್ದಿಸಂಸ್ಥೆಗೆ ದೃಢಪಡಿಸಿದ ಏರ್ ಇಂಡಿಯಾದ ಸಿಇಒ ಹಾಗೂ ಎಂಡಿ ಕ್ಯಾಂಪ್ಬೆಲ್ ವಿಲ್ಸನ್ ಅವರು,‘ನಾವು ಸಾರ್ವಜನಿಕ ಭಾವನೆಗಳನ್ನು ಗೌರವಿಸಬೇಕು ಎಂದು ನಾನು ಭಾವಿಸಿದ್ದೇನೆ’ ಎಂದು ಹೇಳಿದರು.
ಇತ್ತೀಚಿಗಷ್ಟೇ ನಾಗರಿಕ ವಾಯುಯಾನ ಸಚಿವಾಲಯವು ಟರ್ಕಿಷ್ ಏರ್ ಲೈನ್ಸ್ ಗೆ ನಿಂದ ಲೀಸ್ ಗೆ ಪಡೆದುಕೊಂಡಿರುವ ಎರಡು ವಿಮಾನಗಳನ್ನು ಮೂರು ತಿಂಗಳ ಬಳಿಕ ಕಾರ್ಯಾಚರಿಸಲು ಅವಕಾಶ ನೀಡುವುದಿಲ್ಲ ಎಂದು ಭಾರತದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋಕ್ಕೆ ತಿಳಿಸಿತ್ತು.
ಇದಕ್ಕೂ ಮುನ್ನ ಸರಕಾರವು ದೇಶದ ಒಂಭತ್ತು ವಿಮಾನ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತುರ್ಕಿಯ ಮೂಲದ ಭೂ ನಿರ್ವಹಣೆ ಸೇವೆಗಳ ಸಂಸ್ಥೆ ಸೆಲೆಬಿಯ ಭದ್ರತಾ ಅನುಮತಿಯನ್ನು ರದ್ದುಗೊಳಿಸಿತ್ತು.
ಸರಕಾರದ ಈ ಕ್ರಮಗಳು ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆಯ ಸಮಯದಲ್ಲಿ ಪಾಕ್ ಗೆ ತುರ್ಕಿಯದ ಬೆಂಬಲಕ್ಕೆ ಪ್ರತಿಕ್ರಿಯೆಯಾಗಿವೆ. ತನ್ಮೂಲಕ ತುರ್ಕಿಯ ಪಾಕಿಸ್ತಾನವನ್ನು ಬೆಂಬಲಿಸಿದ್ದ ಹಿನ್ನೆಲೆಯಲ್ಲಿ ಪ್ರಸ್ತುತ ಟರ್ಕಿಷ್ ಕಂಪನಿಗಳೊಂದಿಗೆ ಎಂದಿನಂತೆ ಯಾವುದೇ ವ್ಯವಹಾರ ಒಪ್ಪಂದ ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತವು ರವಾನಿಸಿದೆ.
ಟರ್ಕಿಷ್ ಟೆಕ್ನಿಕ್ ಜೊತೆಗಿನ ಒಪ್ಪಂದದ ಕುರಿತು ವಿವರಿಸಿದ ವಿಲ್ಸನ್,‘ನಮ್ಮ ಕೆಲವು ವಿಮಾನಗಳು ಈಗಾಗಲೇ ಅದರ ನಿರ್ವಹಣೆಯಲ್ಲಿದ್ದು ಅದಕ್ಕೆ ನಾವು ಬದ್ಧರಾಗಿದ್ದೇವೆ. ನಾವು ನಿರ್ವಹಣಾ ಸೇವೆಗಳಿಗಾಗಿ ಪರ್ಯಾಯಗಳನ್ನು ಅನ್ವೇಷಿಸುತ್ತಿದ್ದೇವೆ. ಪ್ರಸ್ತುತ ಏರ್ ಇಂಡಿಯಾದ ದೂರ ಪ್ರಯಾಣದ ಬೋಯಿಂಗ್ 777 ವಿಮಾನಗಳ ನಿರ್ವಹಣೆಯನ್ನು ಸಾರ್ವಜನಿಕ ವಲಯದ ಉದ್ಯಮವಾಗಿರುವ ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿ.(ಎಐಇಎಸ್ಎಲ್) ನೋಡಿಕೊಳ್ಳುತ್ತಿದೆ. ಕೆಲವು ವಿಮಾನಗಳನ್ನು ನಿರ್ವಹಣೆಗಾಗಿ ಅಬುಧಾಬಿ ಮತ್ತು ಸಿಂಗಾಪುರಗಳಿಗೂ ಕಳುಹಿಸಲಾಗುತ್ತಿದೆ’ ಎಂದು ತಿಳಿಸಿದರು.







