ಇಂಧನ ದರ ಏರಿಕೆ, ವಾಯುಪ್ರದೇಶ ನಿರ್ಬಂಧದ ಪರಿಣಾಮ: ಜುಲೈವರೆಗೆ ಅಂತರರಾಷ್ಟ್ರೀಯ ಹಾರಾಟ ಕಡಿತಕ್ಕೆ ಏರ್ ಇಂಡಿಯಾ ನಿರ್ಧಾರ; ವರದಿ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ದರಗಳಲ್ಲಿ ತೀವ್ರ ಏರಿಕೆ ಹಾಗೂ ವಾಯುಪ್ರದೇಶ ನಿರ್ಬಂಧಗಳ ಹಿನ್ನೆಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಕಡಿತಗೊಳಿಸಲು ಏರ್ ಇಂಡಿಯಾ ನಿರ್ಧರಿಸಿದೆ ಎಂದು ವರದಿಯಾಗಿದೆ.
India Today ಗೆ ಲಭ್ಯವಾದ ಆಂತರಿಕ ಸಂವಹನ ಮಾಹಿತಿಯ ಪ್ರಕಾರ, ವಿಮಾನಯಾನ ಸಂಸ್ಥೆಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್ಬೆಲ್ ವಿಲ್ಸನ್ ಸಿಬ್ಬಂದಿಗೆ ಕಳುಹಿಸಿದ ಸಂದೇಶದಲ್ಲಿ, “ಹೆಚ್ಚುತ್ತಿರುವ ಕಾರ್ಯಾಚರಣಾ ಸವಾಲುಗಳ ನಡುವೆ ಜೂನ್ ಹಾಗೂ ಜುಲೈನಲ್ಲಿ ವೇಳಾಪಟ್ಟಿಗಳನ್ನು ಕಡಿಮೆ ಮಾಡುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ” ಎಂದು ತಿಳಿಸಿದ್ದಾರೆ.
ಜೆಟ್ ಇಂಧನದ ಭಾರೀ ಬೆಲೆ ಏರಿಕೆ, ವಾಯುಪ್ರದೇಶ ಮುಚ್ಚುವಿಕೆ ಹಾಗೂ ದೀರ್ಘ ಹಾರಾಟ ಮಾರ್ಗಗಳ ಪರಿಣಾಮವಾಗಿ ಎಪ್ರಿಲ್ ಮತ್ತು ಮೇ ತಿಂಗಳಲ್ಲೇ ಕೆಲವು ವಿಮಾನ ಸೇವೆಗಳು ಕಡಿತಗೊಂಡಿವೆ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರಾಚ್ಯ ಯುದ್ಧದ ವ್ಯಾಪಕ ಪರಿಣಾಮ, ಬದಲಾದ ಕರೆನ್ಸಿ ವಿನಿಮಯ ದರಗಳು ಹಾಗೂ ನಿರ್ಬಂಧಿತ ವಾಯುಪ್ರದೇಶ, ಎಲ್ಲವೂ ಸೇರಿ ಸಂಸ್ಥೆಯ ಅಂತರರಾಷ್ಟ್ರೀಯ ಕಾರ್ಯಾಚರಣೆಗಳ ಮೇಲೆ ಗಂಭೀರ ಪರಿಣಾಮ ಬೀರಿವೆ. ಅನೇಕ ಮಾರ್ಗಗಳು ನಷ್ಟವನ್ನೇ ಉಂಟು ಮಾಡುತ್ತಿರುವುದರಿಂದ ಸೇವೆಗಳನ್ನು ಕಡಿತಗೊಳಿಸುವ ಅನಿವಾರ್ಯತೆ ಎದುರಾಗಿದೆ.
ಪಶ್ಚಿಮ ಏಷ್ಯಾ ಸಂಘರ್ಷದ ನಂತರ ಜಾರಿಯಾದ ವಾಯುಪ್ರದೇಶ ನಿರ್ಬಂಧಗಳಿಂದಾಗಿ ಹಲವು ಅಂತರರಾಷ್ಟ್ರೀಯ ಗಮ್ಯಸ್ಥಾನಗಳಿಗೆ ದೀರ್ಘ ಮಾರ್ಗಗಳನ್ನು ಅನುಸರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಇಂಧನ ಬಳಕೆ ಹೆಚ್ಚಾಗಿ, ಕಾರ್ಯಾಚರಣಾ ವೆಚ್ಚಗಳು ಏರಿಕೆಯಾಗಿದೆ. ಇದು ಅತ್ಯಂತ ಸವಾಲಿನ ಪರಿಸ್ಥಿತಿ ಎಂದು ವಿಲ್ಸನ್ ವಿವರಿಸಿದ್ದಾರೆ.
ದೇಶೀಯ ವಿಮಾನಗಳ ಲಾಭಾಂಶದ ಮೇಲೆ ಹೊಡೆತ ಬಿದ್ದಿದ್ದರೂ, ಸರ್ಕಾರದ ಹಸ್ತಕ್ಷೇಪದಿಂದ ಅದರ ಪರಿಣಾಮದ ತೀವ್ರತೆ ಕೆಲಮಟ್ಟಿಗೆ ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.
ಸಿಬ್ಬಂದಿಗೆ ನೀಡಿದ ಸಂದೇಶದಲ್ಲಿ, ಬಿಕ್ಕಟ್ಟಿನ ಸಂದರ್ಭದಲ್ಲೂ ಒಗ್ಗಟ್ಟು ಕಾಪಾಡುವಂತೆ ವಿಲ್ಸನ್ ಮನವಿ ಮಾಡಿದ್ದಾರೆ. ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ವೇಳಾಪಟ್ಟಿಗಳ ಅಡಚಣೆ ಉಂಟಾಗಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಮಧ್ಯಪ್ರಾಚ್ಯದ ಪರಿಸ್ಥಿತಿ ಶೀಘ್ರದಲ್ಲೇ ಸ್ಥಿರಗೊಂಡು, ಹಾರ್ಮುಝ್ ಜಲಸಂಧಿ ಸೇರಿದಂತೆ ಪ್ರಮುಖ ಮಾರ್ಗಗಳು ಪುನಃ ತೆರೆಯುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
2026ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಗ್ರೂಪ್ 22,000 ಕೋಟಿ ರೂ. ಗೂ ಅಧಿಕ ನಷ್ಟ ಅನುಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷದ ಕೊನೆಯಲ್ಲಿ ಹುದ್ದೆಯಿಂದ ನಿವೃತ್ತಿಯಾಗಲು ಯೋಜಿಸಿರುವ ವಿಲ್ಸನ್, ಇಂಧನದ ದರಗಳು ಇಳಿಕೆಯಾಗಿದ್ದು ಹಾಗೂ ವಾಯುಪ್ರದೇಶ ನಿರ್ಬಂಧಗಳು ತೆರವಾದ ಬಳಿಕ ಸಂಸ್ಥೆ ಮತ್ತೆ ಸಾಮಾನ್ಯ ಕಾರ್ಯಾಚರಣೆಗೆ ಮರಳುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.






