ನೀವು ಮತ ನೀಡದಿದ್ದರೆ, ನಾನು ನಿಮ್ಮ ನಗರಕ್ಕೆ ಹಣ ನೀಡಲಾರೆ: ಮತದಾರರಿಗೆ ಅಜಿತ್ ಪವಾರ್ ಬಹಿರಂಗ ಬೆದರಿಕೆ

ಅಜಿತ್ ಪವಾರ್ |Photo Credit : PTI
ಪುಣೆ, ನ. 22: ತನ್ನ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಮಾಲೇಗಾಂವ್ಗೆ ಸಾಕಷ್ಟು ಹಣ ನೀಡುತ್ತೇನೆ. ಮತ ನೀಡದೇ ಇದ್ದರೆ ಹಣ ನೀಡುವುದಿಲ್ಲ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಜಿಲ್ಲೆಯ ಮಾಲೆಗಾಂವ್ ಮತದಾರರಿಗೆ ಬಹಿರಂಗ ಬೆದರಿಕೆ ಒಡ್ಡಿದ್ದಾರೆ.
ಎನ್ಸಿಪಿಯ ಮುಖ್ಯಸ್ಥರಾಗಿರುವ ಪವಾರ್ ಅವರು ಮಾಲೇಗಾಂವ್ ನಗರ ಪಂಚಾಯತ್ಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಬಾರಾಮತಿ ತೆಹ್ಸಿಲ್ನಲ್ಲಿ ಶುಕ್ರವಾರ ಪ್ರಚಾರ ನಡೆಸುವ ಸಂದರ್ಭ ಮತದಾರರಿಗೆ ಈ ಬೆದರಿಕೆ ಒಡ್ಡಿದ್ದಾರೆ.
ಗಮನಾರ್ಹ ವಿಚಾರವೆಂದರೆ ಬಿಜೆಪಿ-ಎನ್ಸಿಪಿ-ಶಿವಸೇನೆಯ ಸರಕಾರದಲ್ಲಿ ಪವಾರ್ ಅವರು ಹಣಕಾಸು ಖಾತೆ ನಿರ್ವಹಿಸುತ್ತಿದ್ದಾರೆ.
‘‘ನೀವು ಎನ್ಸಿಪಿಯ ಎಲ್ಲಾ 18 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಅನುದಾನದ ಕೊರತೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ. ನೀವು ಎಲ್ಲಾ 18 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ, ನಾನು ಭರವಸೆ ನೀಡಿದ್ದನ್ನು ಒದಗಿಸಲು ಬದ್ಧ. ಆದರೆ, ನೀವು ತಿರಸ್ಕರಿಸಿದರೆ, ನಾನು ಕೂಡ ತಿರಸ್ಕರಿಸುತ್ತೇನೆ. ನಿಮ್ಮಲ್ಲಿ ಮತಗಳಿವೆ. ನನ್ನಲ್ಲಿ ಹಣವಿದೆ’’ ಎಂದು ಅವರು ಹೇಳಿದ್ದಾರೆ.
ಅವರ ಈ ಹೇಳಿಕೆ ಬಗ್ಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಪವಾರ್ ಅವರು ಮತದಾರರನ್ನು ಬೆದರಿಸುತ್ತಿದ್ದಾರೆ ಎಂದು ಶಿವಸೇನೆ (ಯುಬಿಟಿ) ನಾಯಕ ಅಂಬಾದಾಸ್ ದಾನ್ವೆ ಹೇಳಿದ್ದಾರೆ.
‘‘ಹಣ ನೀಡುವುದು ಸಾಮಾನ್ಯ ಜನರು ಪಾವತಿಸಿದ ತೆರಿಗೆಯಿಂದ. ಅಜಿತ್ ಪವಾರ್ ಅವರ ಮನೆಯಿಂದ ಅಲ್ಲ. ಪವಾರ್ ಅವರಂತಹ ನಾಯಕರು ಮತದಾರರನ್ನು ಬೆದರಿಸುತ್ತಿರುವಾಗ, ಚುನಾವಣಾ ಆಯೋಗ ಏನು ಮಾಡುತ್ತಿದೆ’’ ಎಂದು ಅವರು ಪ್ರಶ್ನಿಸಿದ್ದಾರೆ.
ನಗರ ಪಂಚಾಯತ್ಗಳಿಗೆ ಡಿಸೆಂಬರ್ 2ರಂದು ಚುನಾವಣೆ ನಡೆಯಲಿದೆ. ಪವಾರ್ ನೇತೃತ್ವದ ಎನ್ಸಿಪಿ ಮಾಲೆಗಾಂವ್ನಲ್ಲಿ ಬಿಜೆಪಿ ಬೆಂಬಲಿತರೊಂದಿಗೆ ಮೈತ್ರಿ ಮಾಡಿಕೊಂಡಿದೆ.







