ಶೇರು ಮಾರುಕಟ್ಟೆ ಪತನ | ಈ ಆರ್ಥಿಕ ಅಪರಾಧ ನಿಲ್ಲಬೇಕು: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

ಅಖಿಲೇಶ್ ಯಾದವ್ | PTI Photo
ಲಕ್ನೊ: ಭಾರತೀಯ ಶೇರು ಮಾರುಕಟ್ಟೆ ಸತತವಾಗಿ ಪತನಗೊಳ್ಳುತ್ತಿರುವ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಮಂಗಳವಾರ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಇದರಿಂದ ಮಧ್ಯಮ ವರ್ಗದ ಹೂಡಿಕೆ ಕೊಚ್ಚಿಕೊಂಡು ಹೋಗುತ್ತಿದೆ ಎಂದು ಅಖಿಲೇಶ್ ಯಾದವ್ ಹರಿಹಾಯ್ದಿದ್ದಾರೆ.
ದೇಶೀಯ ಹೂಡಿಕೆದಾರರನ್ನು ರಕ್ಷಿಸುವಲ್ಲಿ ವಿಫಲಗೊಂಡಿರುವ ಕೇಂದ್ರ ಸರಕಾರ, ಜನರನ್ನು ದಾರಿ ತಪ್ಪಿಸುತ್ತಿದೆ ಎಂದೂ ಅವರು ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಭಾರತೀಯ ಶೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಶೇರು ಮೌಲ್ಯ ಪತನದಿಂದ ಮಧ್ಯಮ ವರ್ಗದ ಜನರ ಹೂಡಿಕೆ ಕೊಚ್ಚಿಕೊಂಡು ಹೋಗುತ್ತಿದೆ. ವಿಶ್ವದೆಲ್ಲೆಡೆಯಿಂದ ಹೂಡಿಕೆದಾರರನ್ನು ಆಹ್ವಾನಿಸಲು ಪೈಪೋಟಿಗೆ ಬಿದ್ದಿರುವ ಡಬಲ್ ಎಂಜಿನ್ ಸರಕಾರಗಳು, ಇತರರಿಗೆ ಮರು ಭರವಸೆ ನೀಡಲು ವಂಚಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೂ ಮುನ್ನ, ಮೊದಲು ದೇಶೀಯ ಹೂಡಿಕೆದಾರರ ಸುರಕ್ಷತೆಯನ್ನು ಖಾತರಿಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ನಿಫ್ಟಿ ತನ್ನ ಕಳಪೆ ಪ್ರದರ್ಶನವನ್ನು ಮುಂದುವರಿಸಿರುವುದರಿಂದ, ಈ ವರ್ಷ ಥಾಯ್ಲೆಂಡ್ ಹಾಗೂ ಫಿಲಿಪ್ಪೀನ್ಸ್ ನಂತರ ಭಾರತದ ಶೇರು ಮಾರುಕಟ್ಟೆ ವಿಶ್ವದ ಮೂರನೆ ದುರ್ಬಲ ಶೇರು ಮಾರುಕಟ್ಟೆಯಾಗಿ ಹೊರ ಹೊಮ್ಮಿದೆ ಎಂಬ ವರದಿಗಳು ಬರುತ್ತಿವೆ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
“ಒಂದು ಕಡೆ 80 ಕೋಟಿ ಜನರು ಸರಕಾರಿ ಪಡಿತರದ ಮೇಲೆ ಅವಲಂಬಿತರಾಗುವಂತೆ ಮಾಡಲಾಗಿದೆ. ಮತ್ತೊಂದೆಡೆ, ಶೇರು ಮಾರುಕಟ್ಟೆಯಲ್ಲಿ ತಮ್ಮ ಉಳಿತಾಯ ಹೂಡಿಕೆ ಮಾಡಿರುವವರನ್ನು ದಿವಾಳಿಯಾಗಿಸಲಾಗಿದೆ. ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲೂ ಸುಳ್ಳು ಪ್ರತಿಪಾದನೆಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಹಾಗೂ ವಂಚಿಸುವ ಕೆಲಸವನ್ನು ಬಿಜೆಪಿ ಸರಕಾರ ಮುಂದುವರಿಸಿದೆ” ಎಂದು ಅವರು ಆರೋಪಿಸಿದ್ದಾರೆ.
“ಹೂಡಿಕೆದಾರರು ಇನ್ನು ಬಿಜೆಪಿ ಬೇಡ ಎಂದು ಹೇಳುತ್ತಿದ್ದಾರೆ!” ಎಂದೂ ಅವರು ಹೇಳಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ಶೇರು ಮಾರುಕಟ್ಟೆ ಗಮನಾರ್ಹ ಏರುಪೇರು ಕಾಣುತ್ತಿರುವ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಸೋಮವಾರ ಶೇ. 1.14ರಷ್ಟು ಕುಸಿತಗೊಂಡಿದ್ದ ಸೆನ್ಸೆಕ್ಸ್, 74,454.41 ಅಂಕಗಳೊಂದಿಗೆ ತನ್ನ ವಹಿವಾಟು ಮುಕ್ತಾಯಗೊಳಿಸಿತ್ತು. ಶೇ. 1.06ರಷ್ಟು ಕುಸಿತಗೊಂಡಿದ್ದ ನಿಫ್ಟಿ, 22,553.35 ಅಂಕಗಳೊಂದಿಗೆ ತನ್ನ ವಹಿವಾಟನ್ನು ಅಂತ್ಯಗೊಳಿಸಿತ್ತು.







