ಅಲ್ ಜಝೀರಾದ ಗಾಝಾ ಬ್ಯೂರೊ ಮುಖ್ಯಸ್ಥ ಅಲ್-ದಹ್ದೌಹ್ ರಿಗೆ ಕೇರಳದ ವರ್ಷದ ಮಾಧ್ಯಮ ವ್ಯಕ್ತಿ ಪ್ರಶಸ್ತಿ
ಗಾಝಾ ಮೇಲಿನ ದಾಳಿಯಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡರೂ ಎದೆಗುಂದದ ಪತ್ರಕರ್ತನಿಗೆ ಕೇರಳದಿಂದ ಗೌರವ

Photo: aljazeera.com
ತಿರುವನಂತಪುರಂ: ಅಲ್ ಜಝೀರಾ ಸುದ್ದಿ ವಾಹಿನಿಯ ಗಾಝಾ ಬ್ಯೂರೊ ಮುಖ್ಯಸ್ಥ ವಯೆಲ್ ಅಲ್-ದಹ್ದೌಹ್ ಅವರನ್ನು ವರ್ಷದ ಮಾಧ್ಯಮ ವ್ಯಕ್ತಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಕೇರಳ ಮಾಧ್ಯಮ ಅಕಾಡೆಮಿ ಪ್ರಕಟಿಸಿದೆ ಎಂದು newslaundry.com ವರದಿ ಮಾಡಿದೆ.
ಈ ಪ್ರಶಸ್ತಿ ಮೊತ್ತವು ಸ್ಮರಣ ಫಲಕ, ಶಿಲ್ಪಾಕೃತಿ ಹಾಗೂ ರೂ. 1 ಲಕ್ಷ ನಗದನ್ನು ಒಳಗೊಂಡಿದೆ. ತನಿಖಾ ಪತ್ರಿಕರ್ತರ ಒಕ್ಕೂಟ ಹಾಗೂ ಮಾಧ್ಯುಮ ನಿಯತಕಾಲಿಕಗಳ ಸಂಪಾದಕರ ಸಮಿತಿಯ ಶಿಫಾರಸಿನ ಮೇರೆಗೆ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಕಾಡೆಮಿಯ ಅಧ್ಯಕ್ಷ ಆರ್.ಎಸ್.ಬಾಬು, “ಅಲ್-ದಹ್ದೌಹ್ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಅಕಾಡೆಮಿ ತನ್ನನ್ನು ತಾನು ಗೌರವಿಸಿಕೊಂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನ್ಯಾಯಯುತ ವರದಿಗಾರಿಕೆ ಮಾಡುವುದನ್ನು ನಿಜಕ್ಕೂ ಅಸಾಧ್ಯಗೊಳಿಸುವ ದೊಡ್ಡ ಪ್ರಮಾಣದ ವೈಯಕ್ತಿಕ ನಷ್ಟ ಹಾಗೂ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಪತ್ರಕರ್ತರು ಸ್ಥಿತಿಸ್ಥಾಪಕತ್ವದ ಸಂಕೇತವಾಗಿದ್ದಾರೆ” ಎಂದೂ ಅವರು ಬಣ್ಣಿಸಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಇಸ್ರೇಲ್ ಗುರಿಯಾಗಿಸಿಕೊಂಡು ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಅಲ್-ದಹ್ದೌಹ್ ಅವರ ಪತ್ನಿ ಹಾಗೂ 15 ವರ್ಷದ ಪುತ್ರ ಮೃತಪಟ್ಟಿದ್ದರು. ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದ ಅಲ್ ಜಝೀರಾ ವೀಡಿಯೋ ಪತ್ರಕರ್ತ ಸಮೀರ್ ಅಬುದಕ ಅವರೊಂದಿಗೆ ಅಲ್-ದಹ್ದೌಹ್ ಕೂಡಾ ಗಾಯಗೊಂಡಿದ್ದಾರೆ. ಜನವರಿ ತಿಂಗಳಲ್ಲಿ ಅವರ 20 ವರ್ಷದ ಹಿರಿಯ ಪುತ್ರ ಕೂಡಾ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದರು.
ಇಸ್ರೇಲ್-ಫೆಲೆಸ್ತೀನ್ ಸಂಘರ್ಷದಲ್ಲಿ ಇಲ್ಲಿಯವರೆಗೆ ಸುಮಾರು 25,000 ಮಂದಿ ಮೃತಪಟ್ಟಿದ್ದು, ಈ ಪೈಕಿ ಹಲವಾರು ಕಾರ್ಯನಿರತ ಪತ್ರಕರ್ತರೂ, ಮುಖ್ಯವಾಗಿ ಫೆಲೆಸ್ತೀನ್ ಪತ್ರಕರ್ತರರು ಮೃತಪಟ್ಟಿದ್ದಾರೆ.







