Telangana | ನಾಮ ನಿರ್ದೇಶನ ಮಾಡದ ರಾಜ್ಯಪಾಲರು; ಅತಂತ್ರ ಸ್ಥಿತಿಯಲ್ಲಿ ಮಾಜಿ ಕ್ರಿಕೆಟಿಗ ಮುಹಮ್ಮದ್ ಅಝರುದ್ದೀನ್ ಸಚಿವ ಸ್ಥಾನ

ಮುಹಮ್ಮದ್ ಅಝರುದ್ದೀನ್ / ಶಿವ ಪ್ರತಾಪ್ ಶುಕ್ಲಾ (Photo credit: PTI)
ಹೈದರಾಬಾದ್: ಮಾಜಿ ಭಾರತೀಯ ಕ್ರಿಕೆಟ್ ನಾಯಕ ಮುಹಮ್ಮದ್ ಅಝರುದ್ದೀನ್ ಅವರು ತೆಲಂಗಾಣದ ರೇವಂತ್ ರೆಡ್ಡಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇದೀಗ ಸಾಂವಿಧಾನಿಕ ಕಾರಣಗಳಿಂದ ಅವರ ಸಚಿವ ಸ್ಥಾನದ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ.
ಅಝರುದ್ದೀನ್ ಅವರು ಅಕ್ಟೋಬರ್ 31, 2025ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಅವರು ರಾಜ್ಯ ವಿಧಾನಸಭೆ ಅಥವಾ ವಿಧಾನಪರಿಷತ್ ನ ಸದಸ್ಯರಾಗಿಲ್ಲ. ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ಶಾಸಕರಲ್ಲದವರು ಸಂಪುಟಕ್ಕೆ ನೇಮಕಗೊಂಡರೆ, ಅವರು ನೇಮಕಗೊಂಡ 6 ತಿಂಗಳೊಳಗೆ ಜನರಿಂದ ಶಾಸಕರಾಗಿ ಆಯ್ಕೆಯಾಗಬೇಕು ಅಥವಾ ವಿಧಾನಪರಿಷತ್ ಗೆ ನಾಮನಿರ್ದೇಶನಗೊಳ್ಳಬೇಕು.
ಅಝರುದ್ದೀನ್ ಅವರಿಗೆ ಇರುವ ಈ ಗಡುವು ಎಪ್ರಿಲ್ 30ರಂದು ಮುಕ್ತಾಯಗೊಳ್ಳಲಿದೆ. ರಾಜ್ಯಪಾಲರ ಕೋಟಾದಡಿ ಇವರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಸಂಪುಟ ಸಭೆಯು 2025ರ ಆಗಸ್ಟ್ ನಲ್ಲಿ ಶಿಫಾರಸು ಮಾಡಿತ್ತು. ಆದರೆ ರಾಜ್ಯಪಾಲರು ಈವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಪ್ರಿಲ್ 30ರೊಳಗೆ ರಾಜ್ಯಪಾಲರು ನಾಮನಿರ್ದೇಶನ ಮಾಡದಿದ್ದರೆ, ಅಝರುದ್ದೀನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.
ಅಝರುದ್ದೀನ್ ಅವರು ಪ್ರಸ್ತುತ ತೆಲಂಗಾಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾರೆ.
ಈ ಕುರಿತ ಶಿಫಾರಸು ಕಡತವನ್ನು ಹಿಂದಿನ ರಾಜ್ಯಪಾಲರಾದ ಜಿಷ್ಣು ದೇವ್ ವರ್ಮಾ ಅವರಿಗೆ ಸಲ್ಲಿಸಲಾಗಿತ್ತು. ಆದರೆ, ಅವರು ಕಡತವನ್ನು ಬಾಕಿ ಉಳಿಸಿಕೊಂಡಿದ್ದರು. ಈ ಬಗ್ಗೆ ತೆಲಂಗಾಣದ ಹಾಲಿ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದೀಗ ಎಲ್ಲರ ಗಮನ ರಾಜಭವನದತ್ತ ನೆಟ್ಟಿದ್ದು, ರಾಜ್ಯಪಾಲರು ಗಡುವಿನೊಳಗೆ ಕಡತಕ್ಕೆ ಅನುಮೋದನೆ ನೀಡುತ್ತಾರೆಯೇ ಎಂಬ ಕುತೂಹಲ ಮೂಡಿದೆ.






