ಪ್ರಧಾನಿ ಮೋದಿ ಕುರಿತು ಆಕ್ಷೇಪಾರ್ಹ ಪೋಸ್ಟ್ ಆರೋಪ; ತೇಜಸ್ವಿ ಯಾದವ್ ವಿರುದ್ಧ ಎಫ್ಐಆರ್

PC: x.com/TNNavbharat
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪದಲ್ಲಿ ರಾಷ್ಟ್ರೀಯ ಜನತಾದಳ ಮುಖಂಡ ತೇಜಸ್ವಿ ಯಾದವ್ ವಿರುದ್ಧ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಿಜೆಪಿ ಸಂಸದ ಮಿಲಿಂದ್ ನರೋಟ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 196, 356, 352 ಮತ್ತು 353ರ ಅನ್ವಯ ಪ್ರಕರಣ ದಾಖಲಾಗಿದೆ. ವಿವಿಧ ಗುಂಪುಗಳ ನಡುವೆ ದ್ವೇಷಭಾವನೆ ಹರಡುವುದು, ಮಾನನಷ್ಟ, ಶಾಂತಿಗೆ ಧಕ್ಕೆ ತರುವ ಸಲುವಾಗಿ ಉದ್ದೇಶಪೂರ್ವಕವಾಗಿ ಅವಮಾನಿಸುವುದು ಮತ್ತು ಕುಚೋದ್ಯದ ಹೇಳಿಕೆ ನೀಡಿದ ಆರೋಪಗಳು ತೇಜಸ್ವಿ ಮೇಲಿವೆ.
ಪ್ರಧಾನಿ ಮೋದಿಯವರ ಗಯಾ ರ್ಯಾಲಿಯನ್ನು "ವಾಕ್ಚಾತುರ್ಯದ ಮಳಿಗೆ" ಎಂದು ಬಿಂಬಿಸುವ ಕಾರ್ಟೂನನ್ನು ತೇಜಸ್ವಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಎಕ್ಸ್ನಲ್ಲಿ ರ್ಯಾಲಿಗೆ ಮುನ್ನ ಈ ಕಾರ್ಟೂನ್ ಪೋಸ್ಟ್ ಮಾಡಿದ್ದು, ಇದರಲ್ಲಿ ಮೋದಿಯವರನ್ನು ಅಂಗಡಿಯ ಮಾಲೀಕನಾಗಿ ಬಿಂಬಿಸಲಾಗಿತ್ತು. "ವಾಕ್ಚಾತುರ್ಯದ ಮಳಿಗೆ" ಎಂಬ ಫಲಕವನ್ನು ಅಂಗಡಿಯಲ್ಲಿ ಅಳವಡಿಸಲಾಗಿತ್ತು. ಬಿಹಾರದಲ್ಲಿ ಎನ್ ಡಿಎಯ 20 ವರ್ಷಗಳ ಅಧಿಕಾರಾವಧಿಯಲ್ಲಿ ಹಾಗೂ ಮೋದಿಯವರ 11 ವರ್ಷದ ಆಡಳಿತದಲ್ಲಿ ಏನು ಸಾಧನೆಯಾಗಿದೆ ಎಂದು ಮೋದಿಯನ್ನು ಮತ್ತೊಂದು ಪೋಸ್ಟ್ ನಲ್ಲಿ ಪ್ರಶ್ನಿಸಲಾಗಿತ್ತು.







