ಜಂತರ್ ಮಂತರ್ ನಲ್ಲಿ ಪತ್ರಕರ್ತೆಯರಿಗೆ ಪೊಲೀಸ್ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ ಆರೋಪ: FIRಗೆ ಆಗ್ರಹಿಸಿ ಪ್ರತಿಭಟನೆ; ಹಲವರು ವಶಕ್ಕೆ

Photo Credit : ANI
ಹೊಸದಿಲ್ಲಿ: ಜಂತರ್ ಮಂತರ್ ನಲ್ಲಿ ಅ.3ರಂದು ನಡೆದ ಪ್ರತಿಭಟನೆಯ ವೇಳೆ ಮೂವರು ಪತ್ರಕರ್ತೆಯರಿಗೆ ಪೊಲೀಸ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಿ ಎಫ್ಐಆರ್ (FIR) ದಾಖಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಹಲವು ಮಂದಿಯನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದರು.
ಸಂಸತ್ ಭವನದ ರಸ್ತೆಯಲ್ಲಿರುವ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನಾಕಾರರು ಧರಣಿ ನಡೆಸಿದರು. ಪತ್ರಕರ್ತೆಯರು ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸಬೇಕು ಮತ್ತು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು. ಸಿಸಿಟಿವಿ ದೃಶ್ಯಾವಳಿ ಹಾಗೂ ಪ್ರಕರಣದ ಮಾಹಿತಿ ಕೇಳಿದರೂ ಪೊಲೀಸರು ನೀಡಲಿಲ್ಲ. ಬದಲಿಗೆ, ತಮ್ಮನ್ನೇ ವಶಕ್ಕೆ ಪಡೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘ನಾವು ಮತ್ತೆ ಪೊಲೀಸ್ ಠಾಣೆಗೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದೆವು. ಆದರೆ ಪೊಲೀಸರು ಅದನ್ನು ನೀಡಲಿಲ್ಲ. ಎಫ್ಐಆರ್ ದಾಖಲಿಸಲಿಲ್ಲ ಅಥವಾ ಪ್ರಕರಣದ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ. ಬದಲಾಗಿ, ನಮ್ಮನ್ನು ವಶಕ್ಕೆ ಪಡೆಯಲಾಯಿತು’ ಎಂದು ಪ್ರತಿಭಟನಾಕಾರರೊಬ್ಬರು ಪಿಟಿಐಗೆ ತಿಳಿಸಿದರು.
ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ವಿರುದ್ಧ ಜುಲೈನಲ್ಲಿಯೂ ಇದೇ ರೀತಿಯ ದೂರು ದಾಖಲಾಗಿತ್ತು. ಆದರೆ, ಆ ದೂರಿನ ಬಗ್ಗೆ ಸರಿಯಾದ ತನಿಖೆ ನಡೆದಿಲ್ಲ ಎಂದು ಮತ್ತೊಬ್ಬ ಪ್ರತಿಭಟನಾಕಾರರು ಆರೋಪಿಸಿದರು. ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ವಿರುದ್ಧ ಜುಲೈನಲ್ಲಿಯೂ ಒಂದು ಪ್ರಕರಣ ದಾಖಲಾಗಿತ್ತು. ಹಾಗಾಗಿ ನಮ್ಮ ಬೇಡಿಕೆಯೂ ಅದೇ ಆಗಿದೆ ಎಂದು ಅವರು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಅ.3ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸ್ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇವೆ ಎಂದು ಮೂವರು ಪತ್ರಕರ್ತೆಯರು ಆರೋಪಿಸಿದ್ದರು. ಈ ಆರೋಪಗಳ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ದೂರುಗಳನ್ನು ಸ್ವೀಕರಿಸಿರುವ ಹೊಸದಿಲ್ಲಿ ಜಿಲ್ಲಾ ಪೊಲೀಸರು, ‘ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ’ ನಡೆಸುವ ಉದ್ದೇಶದಿಂದ ಅವುಗಳನ್ನು ಕಮ್ಲಾ ಮಾರ್ಕೆಟ್ನಲ್ಲಿರುವ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಇಲ್ಲದಿರುವುದನ್ನು ಪ್ರಶ್ನಿಸಿದಾಗ ಸಹಾಯಕ ಪೊಲೀಸ್ ಆಯುಕ್ತರೊಬ್ಬರು (ACP) ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು ಎಂದು ಪತ್ರಕರ್ತೆಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಪೊಲೀಸರೊಂದಿಗೆ ಸಂಘರ್ಷದ ಬಳಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಯಿತು. ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ರವಿವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗಿನ ಜಾವದವರೆಗೆ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಲಾಗಿತ್ತು ಎಂದು ಪ್ರತಿಭಟನಾಕಾರರೊಬ್ಬರು ANIಗೆ ತಿಳಿಸಿದ್ದಾರೆ.
ಪೊಲೀಸ್ ಠಾಣೆಯೊಳಗೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಬಳಸಿದ್ದಾರೆ ಎಂದು ಮತ್ತೊಬ್ಬ ಪ್ರತಿಭಟನಾಕಾರರು ಆರೋಪಿಸಿದರು. ಮಹಿಳೆಯರು ಹಾಗೂ ಅಂಗವಿಕಲ ವ್ಯಕ್ತಿಯ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಅವರು ದೂರಿದರು.
AISA ಸದಸ್ಯರೂ ವಶಕ್ಕೆ
ರಾಜಧಾನಿಯಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಕುರಿತ ಪ್ರತಿಭಟನೆಗಳು ಮುಂದುವರಿದಿರುವ ನಡುವೆಯೇ, ಜ್ಞಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್ ಬಳಿ ನಡೆದ ಪ್ರತ್ಯೇಕ ಪ್ರತಿಭಟನೆಯಲ್ಲೂ ದಿಲ್ಲಿ ಪೊಲೀಸರು ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ (AISA)ನ ಹಲವು ಸದಸ್ಯರನ್ನು ವಶಕ್ಕೆ ಪಡೆದರು.
ANI ವರದಿ ಪ್ರಕಾರ, ಜಂತರ್ ಮಂತರ್ ಬಳಿ ಹಾಕಲಾಗಿದ್ದ ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಿ ಮುಂದೆ ಸಾಗಲು ಪ್ರಯತ್ನಿಸಿದವರಲ್ಲಿ AISA ಅಧ್ಯಕ್ಷೆ ನೇಹಾ ಬೋರಾ, ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಕಪಿಲ್ ಸಿಬಲ್ ಕೂಡ ಇದ್ದರು ಎಂದು ತಿಳಿದು ಬಂದಿದೆ.






