ಜನಾಂಗೀಯ ದ್ವೇಷ ಆರೋಪ: ಐರ್ಲೆಂಡ್ ನಲ್ಲಿ ಆರು ವರ್ಷದ ಬಾಲಕಿ, ಭಾರತೀಯ ಶೆಫ್ ಮೇಲೆ ಹಲ್ಲೆ

ಹಲ್ಲೆಗೊಳಗಾದ ಬಾಲಕಿಯ ಕುಟುಂಬ PC: screengrab/x.com/IrishMirror
ಲಂಡನ್: ಇತ್ತೀಚಿನ ದಿನಗಳಲ್ಲಿ ಐರ್ಲೆಂಡ್ ನಲ್ಲಿ ಜನಾಂಗೀಯ ದ್ವೇಷದಿಂದ ನಡೆಯುತ್ತಿರುವ ದಾಳಿಗಳು ಹೆಚ್ಚುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದು, ಇದೀಗ ಆರು ವರ್ಷದ ವಯಸ್ಸಿನ ಭಾರತ ಮೂಲದ ಬಾಲಕಿ ಮತ್ತು ಭಾರತೀಯ ಸೌಸ್ ಶೆಫ್ ಹಲ್ಲೆಗೆ ಒಳಗಾಗಿರುವುದು ಇದಕ್ಕೆ ನಿದರ್ಶನಗಳಾಗಿವೆ.
ಆಗ್ನೇಯ ಐರ್ಲೆಂಡ್ ನ ವಾಟರ್ ಫೋರ್ಡ್ ಸಿಟಿಯಲ್ಲಿನ ತನ್ನ ಮನೆಯ ಮುಂದೆ ಸ್ನೇಹಿತರ ಜತೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಸೋಮವಾರ ರಾತ್ರಿ 7.30ರ ಸುಮಾರಿಗೆ ಹಲ್ಲೆ ನಡೆಸಿದೆ. ಮೂಲತಃ ಕೇರಳದ ಕೋಟ್ಟಯಂನ ಬಾಲಕಿಯನ್ನು ಹಲವು ಮಂದಿ ಹುಡುಗರು ಹಾಗೂ ಹುಡುಗಿಯರು ಇದ್ದ ಗುಂಪು "ಡರ್ಟಿ ಇಂಡಿಯನ್" ಎಂದು ಹೀಯಾಳಿಸಿ ಭಾರತಕ್ಕೆ ವಾಪಸ್ಸಾಗು ಎಂದು ಆಗ್ರಹಿಸಿದೆ. ಬಾಲಕಿ ಐರ್ಲೆಂಡ್ ನಲ್ಲಿ ಜನಿಸಿದ್ದಳು. ಐದು ಮಂದಿಯ ತಂಡ ಆಕೆಯ ಮುಖದ ಮೇಲೆ ಗುದ್ದಿದ್ದು, ಆಕೆಯ ಗುಪ್ತಾಂಗಕ್ಕೆ ಸೈಕಲ್ ಢಿಕ್ಕಿ ಹೊಡೆಸಿದ್ದಾರೆ. ಜತೆಗೆ ಕುತ್ತಿಗೆಯ ಮೇಲೂ ಹೊಡೆದು ತಲೆಗೂದಲು ಹಿಡಿದೆಳೆದಿದ್ದಾರೆ ಎಂದು ಹೇಳಲಾಗಿದೆ.
ಬಾಲಕಿಯ ತಾಯಿ ಎಂಟು ವರ್ಷ ಹಿಂದೆ ಕೋಟ್ಟಯಂನಿಂದ ನರ್ಸ್ ಆಗಿ ತನ್ನ ಪತಿಯ ಜತೆ ಐರ್ಲೆಂಡ್ ಗೆ ತೆರಳಿದ್ದು, ಇತ್ತೀಚೆಗೆ ಐರ್ಲೆಂಡ್ ನ ಪೌರತ್ವ ಪಡೆದಿದ್ದರು. ದಾಳಿ ಮಾಡಿದ ಗುಂಪಿನಲ್ಲಿದ್ದ ಎಲ್ಲರೂ 12 ರಿಂದ 14 ವರ್ಷ ವಯಸ್ಸಿನವರು ಎಂದು ಬಾಲಕಿಯ ತಾಯಿ ಹೇಳಿಕೆ ನೀಡಿದ್ದಾರೆ. ಇಡೀ ಕುಟುಂಬ ಈ ಘಟನೆಯಿಂದ ಭಯಭೀತವಾಗಿದ್ದು, ಹೊರಗೆ ಆಟವಾಡಲೂ ಹೆದರುವಂತಾಗಿದೆ.
ಇಂಥದ್ದೇ ಇನ್ನೊಂದು ಘಟನೆಯಲ್ಲಿ ಬುಧವಾರ ಬೆಳಿಗ್ಗೆ ಅನಂತರ ದ ಮಾರ್ಕರ್ ಡಬ್ಲೀನ್ ಹೋಟೆಲ್ ನಲ್ಲಿ ಸೌಸ್ ಶೆಫ್ ಆಗಿ ಕೆಲಸ ಮಾಡುತ್ತಿದ್ದ ಕೊಲ್ಕತ್ತಾದ ಲಕ್ಷ್ಮಣ್ ದಾಸ್ ಎಂಬುವವರು ಕೆಲಸಕ್ಕೆ ಹೋಗುತ್ತಿದ್ದ ವೇಳೆ ಅವರ ಮೇಲೆ ಮೂವರ ತಂಡ ಹಿಲ್ಟನ್ ಹೋಟೆಲ್ ಬಳಿ ಹಲ್ಲೆ ಮಾಡಿದೆ. ಅವರನ್ನು ಸೆಂಟ್ ವಿನ್ಸೆಂಟ್ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಫೋನ್, ನಗದು ಮತ್ತು ಎಲೆಕ್ಟ್ರಿಕ್ ಬೈಕನ್ನು ಅಪಹರಿಸಲಾಗಿದೆ. ಜುಲೈ 19, 24, 27 ಮತ್ತು ಆಗಸ್ಟ್ 1ರಂದು ಇಂಥದ್ದೇ ಹಲ್ಲೆಗಳು ಭಾರತೀಯರ ಮೇಲೆ ನಡೆದಿದ್ದವು.







