CEC ವಿರುದ್ಧ ಪ್ರತಿಭಟನೆ ವೇಳೆ ಪತ್ರಕರ್ತೆಯರಿಗೆ ಪೊಲೀಸರಿಂದ ಲೈಂಗಿಕ ಕಿರುಕುಳ ಆರೋಪ : ಮೋದಿ, ಶಾ ವಿರುದ್ಧ ಪ್ರಿಯಾಂಕಾ ಗಾಂಧಿ ಆಕ್ರೋಶ

Photo Credit : PTI
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆದ ಸಂದರ್ಭ ಕೆಲವು ಪತ್ರಕರ್ತೆಯರಿಗೆ, ಪೊಲೀಸ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ್ದರೆನ್ನಲಾದ ಆರೋಪಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಯಾಕೆ ಗಮನಹರಿಸುತ್ತಿಲ್ಲವೆಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರು ರವಿವಾರ ಪ್ರಶ್ನಿಸಿದ್ದಾರೆ.
ಜಂತರ್ಮಂತರ್ನಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದಾಗ ಪೊಲೀಸ್ ಸಿಬ್ಬಂದಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಪತ್ರಕರ್ತೆಯರು ಆಪಾದಿಸಿರುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಹಲವು ಪತ್ರಕರ್ತರು ಈ ಬಗ್ಗೆ ಪ್ರತಿಭಟನೆ ನಡೆಸಿದ ಹೊರತಾಗಿಯೂ ಯಾರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿಲ್ಲ ಅಥವಾ ಯಾವುದೇ ದೃಢವಾದ ಕ್ರಮವನ್ನು ಕೈಗೊಳ್ಳಲಾಗಿಲ್ಲವೆಂದು ಪ್ರಿಯಾಂಕಾ ಅವರು ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ಆಪಾದಿಸಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ಕೂಡಾ, ಪೊಲೀಸರು ತಮ್ಮೊಂದಿಗೆ ಒರಟಾಗಿ ವರ್ತಿಸಿದ್ದರೆಂದು ಆರೋಪಿಸಿರುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರಿಯಾಂಕಾ ತಿಳಿಸಿದ್ದಾರೆ.
‘‘ನರೇಂದ್ರ ಮೋದೀಜಿ, ಅಮಿತ್ ಶಾಜೀ, ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ? ಒಂದು ವೇಳೆ ಅಲ್ಲವೆಂದಾದರೆ, ಈ ಬಗ್ಗೆ ನೀವು ಯಾಕೆ ಗಮನಹರಿಸುತ್ತಿಲ್ಲ?’’ ಎಂದು ಪ್ರಿಯಾಂಕಾ ಎಕ್ಸ್ನಲ್ಲಿ ಪ್ರಶ್ನಿಸಿದ್ದಾರೆ.
ಜಂತರ್ ಮಂತರ್ನಲ್ಲಿ ಆಕ್ಟೋಬರ್ ಮೂರರಂದು ಮುಖ್ಯಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆದ ಸಂದರ್ಭ ಪೊಲೀಸ್ ಸಿಬ್ಬಂದಿ ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಮೂವರು ಮಹಿಳಾ ಪತ್ರಕರ್ತರು ಆಪಾದಿಸಿದ್ದರು. ಅವರ ದೂರುಗಳ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಗಾಗಿ ಕ್ರೈಂ ಬ್ರಾಂಚ್ಗೆ ವರ್ಗಾಯಿಸಲಾಗಿದೆಯೆಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.
ಜಂತರ್ಮಂತರ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ದಿಲ್ಲಿ ಪೊಲೀಸರು ನಡೆಸಿಕೊಂಡ ರೀತಿ ಬಗ್ಗೆ ಭಾರತೀಯ ಪ್ರೆಸ್ ಕೌನ್ಸಿಲ್ ತೀವ್ರ ಆಘಾತ ಹಾಗೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ದೂರಿನ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಭದ್ರತೆಯನ್ನು ಒದಗಿಸುವುದೇ ಕರ್ತವ್ಯವಾಗಿರುವ ಪೊಲೀಸ್ ಸಿಬ್ಬಂದಿಯಿಂದಲೇ ಮಹಿಳೆಯರು ಬೆದರಿಕೆಯನ್ನು ಎದುರಿಸಿದ್ದಾರೆ. ಕಾಲೇಜು ವಿದ್ಯಾರ್ಥಿನಿಯರಿಂದ ಹಿಡಿದು ಪತ್ರಕರ್ತೆಯರವರೆಗೆ, ಎಲ್ಲೆಡೆಯೂ ಮಹಿಳೆಯರು ಸುರಕ್ಷತೆಯ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.






