ತನ್ನ ನೆಲದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆಯ ಸಂಚು ವಿಫಲಗೊಳಿಸಿದ ಅಮೆರಿಕ; ವರದಿ
ಹತ್ಯೆ ಸಂಚಿನಲ್ಲಿ ಭಾಗಿಯಾದ ಆರೋಪದ ಕುರಿತಂತೆ ಭಾರತಕ್ಕೆ ಎಚ್ಚರಿಸಿದ ಅಮೆರಿಕ
ಗುರ್ಪತ್ವಂತ್ ಸಿಂಗ್ ಪನ್ನುನ್ (twitter/OnTheNewsBeat)
ಹೊಸದಿಲ್ಲಿ: ತನ್ನ ನೆಲದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರ್ಪತ್ವಂತ್ ಸಿಂಗ್ ಪನ್ನುನ್ನಲ್ಲಿ ಕೊಲ್ಲಲು ಹೂಡಿದ ಸಂಚನ್ನು ಅಮೆರಿಕ ವಿಫಲಗೊಳಿಸಿದೆ. ಪನ್ನುನ್ನನ್ನು ಹತ್ಯೆಗೈಯುವ ಸಂಚಿನಲ್ಲಿ ಭಾರತ ಶಾಮೀಲಾಗಿದೆ ಎಂಬ ಮಾತುಗಳ ಕುರಿತಂತೆ ಅಮೆರಿಕ ಸರ್ಕಾರ ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿದೆ ಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ indiatoday.in ವರದಿ ಮಾಡಿದೆ.
ಅಮೆರಿಕನ್-ಕೆನಡಿಯನ್ ಪೌರನಾಗಿರುವ ಪನ್ನುನ್ ಅಮೆರಿಕಾದ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಮುಖಂಡನಾಗಿದ್ದು ಭಾರತ ಸರ್ಕಾರವು ಈ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಗುರುತಿಸಿದೆ.
ಪನ್ನುನ್ನಂತೆಯೇ ಖಾಲಿಸ್ತಾನಿ ಪರ ಹೋರಾಟಗಾರನಾಗಿರುವ ಹಾಗೂ ಕೆನಡಾದಲ್ಲಿ ಹತ್ಯೆಗೀಡಾಗಿದ್ದ ಹರ್ದೀಪ್ ಸಿಂಗ್ ನಿಜ್ಜರ್ನ ಹತ್ಯೆಯಲ್ಲಿ ಭಾರತ ಸರ್ಕಾರದ ಏಜಂಟರು ಶಾಮೀಲಾಗಿದ್ದಾರೆಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಈ ಹಿಂದೆ ಆರೋಪಿಸಿದ್ದರು. ನಂತರ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಬಿರುಕು ಬಿಟ್ಟಿದ್ದವು.
ಅಮೆರಿಕಾದಲ್ಲಿ ಪನ್ನುನ್ ಹತ್ಯೆಗೆ ಸಂಚು ನಡೆದಿದೆ ಎಂಬ ಕುರಿತಂತೆ ಅಮೆರಿಕಾ ಸರ್ಕಾರ ಎಚ್ಚರಿಕೆ ನೀಡಿತ್ತೇ ಎಂಬ ಕುರಿತು ಪನ್ನುನ್ ತಿಳಿಸಲು ನಿರಾಕರಿಸಿದ್ದಾನೆ.
ನವೆಂಬರ್ 19ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸುವವರ ಜೀವಗಳು ಅಪಾಯದಲ್ಲಿರಲಿವೆ ಎಂಬ ವೀಡಿಯೋ ಸಂದೇಶದ ಮೂಲಕ ಪನ್ನುನ್ ಇತ್ತೀಚೆಗೆ ವಿವಾದಕ್ಕೀಡಾಗಿದ್ದ.