ಅಮೀರ್ ಹುಸೈನ್ ಲೋನ್ : ಜಮ್ಮು ಮತ್ತು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕನ ಸ್ಫೂರ್ತಿದಾಯಕ ಪಯಣ

ಅಮೀರ್ ಹುಸೈನ್ ಲೋನ್ | Photo: hindustantimes.com
ಶ್ರೀನಗರ: ಅಮೀರ್ ಹುಸೈನ್ ಲೋನ್ ಬಿಜ್ ಬೆಹರದ ವಾಘಮ ಗ್ರಾಮದ ವಿಕಲಚೇತನ ಕ್ರಿಕೆಟ್ ಆಟಗಾರ. ಸದ್ಯ ಇವರು ಜಮ್ಮು ಮತ್ತು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕ. ತಮಗೆ ಎಂಟು ವರ್ಷ ವಯಸ್ಸಿದ್ದಾಗ ಅಮೀರ್ ಹುಸೈನ್ ಲೋನ್ ಅಪಘಾತಕ್ಕೆ ತುತ್ತಾದರು. ಆದರೆ. ತಮ್ಮದೇ ಆದ ವಿಶಿಷ್ಟ ಆಟದ ಶೈಲಿಯನ್ನು ಹೊಂದಿರುವ ಅಮೀರ್ ಇತರರಿಗೆ ಸ್ಫೂರ್ತಿದಾಯಕವಾಗಿದ್ದಾರೆ. ಶಾಲಾ ಶಿಕ್ಷಕಿಯೊಬ್ಬರು ಅಮೀರ್ ರಲ್ಲಿನ ಕ್ರಿಕೆಟ್ ಪ್ರತಿಭೆಯನ್ನು ಕಂಡು, ಅವರನ್ನು ಪ್ಯಾರಾ ಕ್ರಿಕೆಟ್ ತಂಡಕ್ಕೆ 2013ರಲ್ಲಿ ಸೇರ್ಪಡೆ ಮಾಡಿದಾಗಿನಿಂದ ಅವರು ವೃತ್ತಿಪರ ಕ್ರಿಕೆಟ್ ಆಡುತ್ತಿದ್ದಾರೆ. ಅಮೀರ್ ತಮ್ಮ ಕಾಲನ್ನು ಬಳಸಿ ಬೌಲಿಂಗ್ ಮಾಡಿದರೆ, ತನ್ನ ಕಂಕುಳು ಹಾಗೂ ಕುತ್ತಿಗೆಯನ್ನು ಬಳಸಿ ಬ್ಯಾಟಿಂಗ್ ಮಾಡುತ್ತಾರೆ. ಅಮೀರ್ ತಾವು ಎಂಟು ವರ್ಷ ವಯಸ್ಸಿನವರಾಗಿದ್ದಾಗ ತಮ್ಮ ತಂದೆಯ ಗಿರಣಿಯ ಬಳಿ ನಡೆದ ಅಪಘಾತದಲ್ಲಿ ತಮ್ಮೆರಡೂ ಕೈಗಳನ್ನೂ ಕಳೆದುಕೊಂಡರು.
ತಮಗೆ ಅಪಘಾತವಾದ ನಂತರದ ಬದುಕಿನಲ್ಲಿ ಸರ್ಕಾರ ತಮಗ್ಯಾವ ನೆರವನ್ನೂ ನೀಡಲಿಲ್ಲ ಎಂದು ಹೇಳುವ ಅಮೀರ್, “ನನಗೆ ಅಪಘಾತವಾದ ನಂತರ ನಾನು ನನ್ನ ಭರವಸೆಯನ್ನು ಕಳೆದುಕೊಳ್ಳಲಿಲ್ಲ ಹಾಗೂ ಕಠಿಣ ಪರಿಶ್ರಮ ಪಟ್ಟೆ. ನಾನೇ ಎಲ್ಲವನ್ನೂ ಸ್ವಂತವಾಗಿ ಮಾಡಿಕೊಳ್ಳುತ್ತೇನೆ ಹಾಗೂ ನಾನು ಯಾರ ಮೇಲೂ ಅವಲಂಬಿತನಾಗಿಲ್ಲ. ನನಗೆ ಅಪಘಾತವಾದ ನಂತರ ಯಾರೂ ನನಗೆ ಸಹಾಯ ಮಾಡಲಿಲ್ಲ. ಸರ್ಕಾರ ಕೂಡಾ ನನಗೆ ನೆರವು ನೀಡಲಿಲ್ಲ. ಆದರೆ, ನನ್ನ ಕುಟುಂಬ ಮಾತ್ರ ಸದಾ ನನ್ನ ನೆರವಿಗೆ ನಿಂತಿತು” ಎನ್ನುತ್ತಾರೆ.
ತಾನು ಕೈಗಳಿಲ್ಲದೆ ಆಡುವುದನ್ನು ಕಂಡು ಎಲ್ಲರೂ ಹೇಗೆ ಆಘಾತಗೊಂಡರು ಎಂದು ವಿವರಿಸುವ ಅಮೀರ್, “ನಾನು 2013 ಹಾಗೂ 2018ರಲ್ಲಿ ರಾಷ್ಟ್ರೀಯ ತಂಡದ ಪರವಾಗಿ ದಿಲ್ಲಿಯಲ್ಲಿ ಆಡಿದೆ. ಅಲ್ಲಿ ನಾನು ನನ್ನ ಅಂತಾರಾಷ್ಟ್ರೀಯ ಪಂದ್ಯವನ್ನು ಬಾಂಗ್ಲಾದೇಶದೆದುರು ಆಡಿದೆ. ಇದಾದ ನಂತರ ನಾನು ನೇಪಾಳ, ಶಾರ್ಜಾ ಹಾಗೂ ದುಬೈನಲ್ಲಿ ಆಡಿದೆ. ಎಲ್ಲರೂ ನಾನು ಕಾಲಿನಲ್ಲಿ ಬೌಲಿಂಗ್ ಮಾಡುವುದು ಹಾಗೂ ಕಂಕುಳು ಮತ್ತು ಕುತ್ತಿಗೆ ನೆರವಿನಿಂದ ಬ್ಯಾಟಿಂಗ್ ಮಾಡುವುದನ್ನು ಕಂಡು ಆಘಾತಗೊಂಡರು. ಭಗವಂತನು ನನಗೆ ಕ್ರಿಕೆಟ್ ಆಡುವ ಸಾಮರ್ಥ್ಯ ನೀಡಿರುವುದಕ್ಕೆ ಅವನಿಗೆ ಧನ್ಯವಾದ ಹೇಳುತ್ತೇನೆ” ಎನ್ನುತ್ತಾರೆ.
ನಾನು ಕ್ರಿಕೆಟ್ ಆಡಲು ತೆರಳಿದಲ್ಲೆಲ್ಲ ನನಗೆ ಅಪಾರ ಪ್ರಶಂಸೆ ವ್ಯಕ್ತವಾಗುತ್ತದೆ ಎನ್ನುತ್ತಾರೆ ಜಮ್ಮು ಮತ್ತು ಕಾಶ್ಮೀರ ಮೂಲದ ಈ ಕ್ರಿಕೆಟಿಗ.
“ನನಗಾಗಿ ಪಿಕಲ್ ಎಂಟರ್ ಟೈನ್ ಮೆಂಟ್ ಸಂಸ್ಥೆಯವರು ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ಅದರ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು. ನಾನೊಂದು ಸಿನಿಮಾವನ್ನು ವೀಕ್ಷಿಸಲು ತೆರಳಿದ್ದಾಗ ಅಲ್ಲಿ ವಿಕಿ ಕೌಶಲ್ ಕೂಡಾ ಅಲ್ಲಿದ್ದರು ಹಾಗೂ ನನ್ನ ಕ್ರಿಕೆಟ್ ಪಯಣದ ಕುರಿತು ದಿಗ್ಭ್ರಾಂತರಾಗಿ, ನನ್ನ ಕುರಿತು ಸಿನಿಮಾವೊಂದನ್ನು ನಿರ್ಮಿಸುವುದಾಗಿ ಹೇಳಿದರು” ಎಂದು ಈ ಕ್ರಿಕೆಟಿಗ ಹೇಳುತ್ತಾರೆ.
“ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ನಮ್ಮ ಅಚ್ಚುಮೆಚ್ಚಿನ ಆಟಗಾರರಾಗಿದ್ದು, ದೇವರು ಬಯಸಿದರೆ, ನಾವು ಅವರನ್ನು ಆದಷ್ಟೂ ಶೀಘ್ರವಾಗಿ ಭೇಟಿ ಮಾಡುತ್ತೇವೆ” ಎಂದರು ಅಮೀರ್ ಹುಸೈನ್ ಲೋನ್.







