ಚುನಾವಣೆಗೆ ಮುನ್ನವೇ "ಅಂಗ, ಬಂಗ, ಕಳಿಂಗ"ದಲ್ಲಿ ಬಿಜೆಪಿಗೆ ಗದ್ದುಗೆ ಎಂದಿದ್ದ ಅಮಿತ್ ಶಾ!

Photo: x.com/AmitShah
ಹೊಸದಿಲ್ಲಿ: "ಮೇ 4ರಂದು ಮುಂಜಾನೆ ಮತ ಎಣಿಕೆ ಆರಂಭವಾಗಲಿದೆ. 9 ಗಂಟೆಯ ವೇಳೆಗೆ ಮೊದಲ ಸುತ್ತು, 10 ಗಂಟೆಗೆ ಎರಡನೇ ಸುತ್ತು ಮುಗಿಯುತ್ತದೆ. ಮಧ್ಯಾಹ್ನ 1 ಗಂಟೆಗೆ ಬಹುತೇಕ ಎಣಿಕೆ ಕಾರ್ಯ ಮುಗಿದಿರುತ್ತದೆ. ಅದು ದೀದಿಗೆ ಟಾಟಾ ಬೈ ಬೈ ಆಗಿರುತ್ತದೆ"- ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆಗೆ ಮುನ್ನ ಏಪ್ರಿಲ್ 22ರಂದು ವಿವಿಧ ರಾಜಕೀಯ ರ್ಯಾಲಿಗಳಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಮೇಲಿನಂತೆ ಭವಿಷ್ಯ ನುಡಿದಿದ್ದರು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ 15 ವರ್ಷಗಳ ಆಳ್ವಿಕೆ ಕೊನೆಗೊಳಿಸಿ ಟಿಎಂಸಿ ಭದ್ರಕೋಟೆಯನ್ನು ಭೇದಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮುಖಂಡರ ಈ ಭವಿಷ್ಯವಾಣಿ ಕುರಿತ ವಿಡಿಯೊಗಳು ಫಲಿತಾಂಶ ಪ್ರಕಟಣೆಯ ಬೆನ್ನಲ್ಲೇ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಅಂತೆಯೇ ಈ ಚುನಾವಣೆ ಮುಗಿದ ಬಳಿಕ ಬಿಜೆಪಿ ಆಡಳಿತ ಅಂಗ, ಬಂಗ ಮತ್ತು ಕಳಿಂಗ (ಬಿಹಾರ, ಬಂಗಾಳ, ಒಡಿಶಾ) ಪ್ರದೇಶಗಳಿಗೆ ವ್ಯಾಪಿಸಿರುತ್ತದೆ ಎಂದು ಶಾ ಹೇಳಿದ್ದು ಇದೀಗ ನಿಜವಾಗಿದೆ.
ಅಮಿತ್ ಶಾ ಹೇಳಿಕೆಯ ಬೆನ್ನಲ್ಲೇ ಕಾರ್ಯಕರ್ತರು ಬೆಂಬಲಿಗರು ಈ ಬಾರಿ ಬಿಜೆಪಿ ಗೆಲುವಿನ ವಿಶ್ವಾಸ ಹೊಂದಿದ್ದರು
ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷ 1970ರ ದಶಕದಲ್ಲಿ ಈ ಮೂರು ಪೂರ್ವರಾಜ್ಯಗಳಲ್ಲಿ ಅಧಿಕಾರ ಹೊಂದಿತ್ತು. ತುರ್ತು ಪರಿಸ್ಥಿತಿ ಬಳಿಕ ನಡೆದ ಬಂಗಾಳ ಚುನಾವಣೆಯಲ್ಲಿ ಎಡಪಕ್ಷಗಳ ವಿರುದ್ಧ ಸೋಲು ಅನುಭವಿಸಿತ್ತು. ಕ್ರಮೇಣ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಯುಗ ಅಂತ್ಯವಾಯಿತು.
ಬಿಜೆಪಿ ಮುಖ್ಯಸ್ಥರಾದ ಮೊದಲ ದಿನದಿಂದಲೇ ಟಿಎಂಸಿ ವಿರುದ್ಧ ತಳಹಂತದ ಅಭಿಯಾನ ಕೈಗೊಂಡಿದ್ದರು. ಈ ಪ್ರಯತ್ನ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ನಿಲ್ಲಲಿಲ್ಲ. 2021ರ ಚುನಾವಣೆಯಲ್ಲಿ ನಿರಾಸೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಂಸದರ ಸಂಖ್ಯೆ 18 ರಿಂದ 12ಕ್ಕೆ ಇಳಿದರೂ ಎದೆಗುಂದದೇ ಪಕ್ಷ ಸಂಘಟನೆಯನ್ನು ನಿರಂತರವಾಗಿ ಮಾಡಿಕೊಂಡು ಬಂದ ಶಾ ಈ ಬಾರಿ ಅದರ ಫಲ ಸಿಗುವ ವಿಶ್ವಾಸದಲ್ಲಿದ್ದು, ರ್ಯಾಲಿಗಳಲ್ಲಿ ಆತ್ಮವಿಶ್ವಾಸದಿಂದ ಬೈ ದೀದಿ ಪ್ರತಿಪಾದನೆ ಮಾಡುತ್ತಾ ಬಂದಿದ್ದರು.






