ಇಂಡಿಯಾ ಒಕ್ಕೂಟದ ʼಮತಗಳ್ಳತನʼ ಆರೋಪಕ್ಕೆ ತಿರುಗೇಟು ನೀಡಿ: ಬಿಹಾರದ ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಸೂಚನೆ

Photo : PTI
ಪಾಟ್ನಾ: ಮತಗಳ್ಳತನದ ಕುರಿತು ಕಟ್ಟುಕತೆಗಳನ್ನು ಹರಡುತ್ತಿರುವ ಇಂಡಿಯಾ ಮೈತ್ರಿಕೂಟದ ಆರೋಪಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಹಾಗೂ ವಿರೋಧ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ, ನುಸುಳುವಿಕೆ ಸಮಸ್ಯೆ ಹೆಚ್ಚಾಗಲಿದೆ ಎಂಬ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಹಾರದ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಪಾಟ್ನಾದಿಂದ ಸುಮಾರು 50 ಕಿಮೀ ದೂರದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್, ಆರ್ಜೆಡಿ ಹಾಗೂ ಎಡರಂಗ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಮುಂಬರುವ ಚುನಾವಣೆಯಲ್ಲಿ ಕೇವಲ ಸಾಮಾನ್ಯ ಜಯವಲ್ಲ; ಬದಲಿಗೆ 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಮೂರನೆಯ ಎರಡರಷ್ಟು ಬಹುಮತವನ್ನು ಖಾತರಿಪಡಿಸಿ ಎಂದು ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ಕಳೆದ ತಿಂಗಳು ಮುಕ್ತಾಯಗೊಂಡ ರಾಹುಲ್ ಗಾಂಧಿ ನೇತೃತ್ವದ ಮತ ಅಧಿಕಾರ ಯಾತ್ರೆಯ ಕುರಿತು ಪ್ರಸ್ತಾಪಿಸಿದ ಅಮಿತ್ ಶಾ, ಬಾಂಗ್ಲಾದೇಶದಿಂದ ನುಸುಳಿರುವ ಅಕ್ರಮ ವಲಸಿಗರನ್ನು ರಕ್ಷಿಸುವ ಉದ್ದೇಶವನ್ನು ಈ ಯಾತ್ರೆ ಹೊಂದಿತ್ತು ಎಂದು ಆರೋಪಿಸಿದರು. “ನುಸುಳುಕೋರರರಿಗೆ ನಮ್ಮ ದೇಶದಲ್ಲಿ ಮತ ಚಲಾಯಿಸುವ ಅಧಿಕಾರವಿರಬೇಕೆ? ಭಾರತೀಯ ಪ್ರಜೆಯು ಅನುಭವಿಸುವ ಎಲ್ಲ ಸೌಲಭ್ಯಗಳಿಗೆ ಅವರಿಗೂ ಪ್ರವೇಶವಿರಬೇಕೆ?” ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಯಾಗಿ, “ಇಲ್ಲ” ಎಂದು ಸಭಿಕರು ಉತ್ತರಿಸಿದರು.





