ಮೂರು ಯುದ್ಧಗಳಲ್ಲಿ ಬಳಸಲಾದ ವಾಯುಪಡೆಯ ಏರ್ಸ್ಟ್ರಿಪ್ ನಕಲಿ ದಾಖಲೆ ಸೃಷ್ಟಿಸಿ ಮಾರಾಟ!

ಸಾಂದರ್ಭಿಕ ಚಿತ್ರ PC: freepik
ಫಿರೋಜ್ಪುರ,ಪಂಜಾಬ್: ಭಾರತೀಯ ವಾಯುಪಡೆ 1962, 1965 ಮತ್ತು 1971ರ ಯುದ್ಧದಲ್ಲಿ ಅತ್ಯಾಧುನಿಕ ಲ್ಯಾಂಡಿಂಗ್ ಮೈದಾನವಾಗಿ ಬಳಸಿದ್ದ ವಾಯುನೆಲೆಯನ್ನು ಕೆಲ ಕಂದಾಯ ಅಧಿಕಾರಿಗಳ ಜತೆ ಷಾಮೀಲಾದ ತಾಯಿ- ಮಗ 1997ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ 28 ವರ್ಷ ಬಳಿಕ ಆರೋಪಿಗಳಾದ ಆಶಾ ಅನ್ಸಾಲ್ ಹಾಗೂ ಆಕೆಯ ಮಗ ನವೀನ್ ಚಂದ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಪಂಜಾಬ್ ವಿಚಕ್ಷಣಾ ಪಡೆಗೆ ಸೂಚನೆ ನೀಡಿದೆ. ಜೂನ್ 20ರಂದು ಪ್ರಕಟವಾದ ವರದಿ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಭಾರತೀಯ ದಂಡಸಂಹಿತೆ ಸೆಕ್ಷನ್ 419, 420, 465, 467, 471, 120 ಬಿ ಅನ್ಯ ಪ್ರಕರಣ ದಾಖಲಾಗಿದೆ. ಈ ಆಯಕಟ್ಟಿನ ರಕ್ಷಣಾ ಭೂಮಿಯನ್ನು ಮಾರಾಟ ಮಾಡುವ ದಂಧೆಯಲ್ಲಿ ಷಾಮೀಲಾದ ಎಲ್ಲರನ್ನು ಪತ್ತೆ ಮಾಡುವ ತನಿಖಾ ತಂಡದ ನೇತೃತ್ವವನ್ನು ಡಿಎಸ್ಪಿ ಕರಣ್ ಶರ್ಮಾ ವಹಿಸಿಕೊಂಡಿದ್ದಾರೆ.
ಈ ವಾಯುನೆಲೆ (ಏರ್ಸ್ಟ್ರಿಪ್) ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಫತ್ತುವಾಲಾ ಗ್ರಾಮದಲ್ಲಿದೆ. 2025ರ ಮೇ ತಿಂಗಳಲ್ಲಿ ಹೈಕೋರ್ಟ್ ಮಧ್ಯಪ್ರವೇಶದ ಬಳಿಕ, ಈ ಭೂಮಿ ಮತ್ತೆ ರಕ್ಷಣಾ ಸಚಿವಾಲಯದ ಸುಪರ್ದಿಗೆ ಬಂತು.
ಈ ಭೂಮಿ ಭಾರತೀಯ ವಾಯುಪಡೆಗೆ ಸಂಬಂಧಿಸಿದ್ದು ಎನ್ನುವುದನ್ನು ವಿಚಕ್ಷಣಾ ಬ್ಯೂರೊದ ತನಿಖೆ ದೃಢಪಡಿಸಿದೆ. 1945ರ ಮಾರ್ಚ್ 12ರಂದು ಬ್ರಿಟಿಷ್ ಆಡಳಿತ ಎರಡನೇ ಜಾಗತಿಕ ಯುದ್ಧದ ಬಳಕೆಗಾಗಿ ಇದನ್ನು ವಶಪಡಿಸಿಕೊಂಡಿತ್ತು. ಇದು ಐಎಎಫ್ ವಶದಲ್ಲೇ ಇದ್ದು, ಮೂರು ಯುದ್ಧಗಳಿಗೆ ಇದನ್ನು ಬಳಸಿಕೊಳ್ಳಲಾಗಿತ್ತು. ದುಮ್ಮಿವಾಲಾ ಗ್ರಾಮದ ಆರೋಪಿಗಳಾದ ಆಶಾ ಮತ್ತು ನವೀನ್, ಈ ಭೂಮಿಯ ಮಾಲೀಕತ್ವ ತಮ್ಮದು ಎಂದು ಸುಳ್ಳುದಾಖಲೆ ಸೃಷ್ಟಿಸಿ, ಕಂದಾಯ ಅಧಿಕಾರಿಗಳ ಸಹಕಾರದಿಂದ ಮಾರಾಟ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.







