ಕಾಂಗ್ರೆಸ್ನ ವಿದೇಶಾಂಗ ವ್ಯವಹಾರಗಳ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಆನಂದ ಶರ್ಮಾ ರಾಜೀನಾಮೆ

Photo Credit: thehindu
ಹೊಸದಿಲ್ಲಿ,ಆ.10: ಕಾಂಗ್ರೆಸ್ನ ವಿದೇಶಾಂಗ ವ್ಯವಹಾರಗಳ ವಿಭಾಗದ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಆನಂದ ಶರ್ಮಾ ಅವರು ರವಿವಾರ ತನ್ನ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ವಿಭಾಗದ ಪುನರ್ ಸಂಘಟನೆ ಮತ್ತು ಅದರಲ್ಲಿ ಯುವ ನಾಯಕರ ಸೇರ್ಪಡೆಗೆ ಅನುಕೂಲ ಕಲ್ಪಿಸುವುದು ತನ್ನ ರಾಜೀನಾಮೆಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಶರ್ಮಾ ಸುಮಾರು ಒಂದು ದಶಕದಿಂದಲೂ ಈ ವಿಭಾಗದ ಅಧ್ಯಕ್ಷರಾಗಿದ್ದರು. 2018ರಲ್ಲಿ ವಿಭಾಗವನ್ನು ಮರುರಚಿಸಲಾಗಿತ್ತು.
ಸಮರ್ಥ ಮತ್ತು ಭರವಸೆಯ ಯುವನಾಯಕರನ್ನು ಸೇರಿಸಿಕೊಳ್ಳಲು ಮತ್ತು ವಿದೇಶ ವ್ಯವಹಾರಗಳ ವಿಭಾಗದ ಕಾರ್ಯ ಚಟುವಟಿಕೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲು ಅದನ್ನು ಮರುರಚಿಸುವ ಅಗತ್ಯವಿದೆ ಎಂದು ಶರ್ಮಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಸುಮಾರು ನಾಲ್ಕು ದಶಕಗಳ ಕಾಲ ಪಕ್ಷದ ವಿದೇಶ ವ್ಯವಹಾರಗಳ ಮುಂಚೂಣಿಯಲ್ಲಿದ್ದ ಶರ್ಮಾ, ವಿಭಾಗವನ್ನು ಮರುರಚಿಸುವ ಅಗತ್ಯದ ಬಗ್ಗೆ ತನ್ನ ಅಭಿಪ್ರಾಯಗಳನ್ನು ತಾನು ಈ ಹಿಂದೆ ಖರ್ಗೆ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದೆ ಎಂದು ಹೇಳಿದರು.
ವಿಶ್ವಾದ್ಯಂತ ಸಮಾನ ಮನಸ್ಕ ಪಕ್ಷಗಳೊಂದಿಗೆ ಕಾಂಗ್ರೆಸ್ ಸಂಬಂಧಗಳನ್ನು ರೂಪಿಸುವಲ್ಲಿ ಮತ್ತು ಬಲಗೊಳಿಸುವಲ್ಲಿ ವಿಭಾಗವು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದೆ ಎಂದು ಶರ್ಮಾ ಹೇಳಿದರು







