ಅನಂತ್ ನಾಗ್ ಎನ್ ಕೌಂಟರ್: ಇನ್ನೋರ್ವ ಯೋಧ ಹುತಾತ್ಮ , ಸಾವಿನ ಸಂಖ್ಯೆ ನಾಲ್ಕಕ್ಕೇರಿಕೆ

Photo: PTI
ಶ್ರೀನಗರ: ಬುಧವಾರ ಭಯೋತ್ಪಾದಕರೊಂದಿಗೆ ಗುಂಡಿನ ಕಾಳಗದಲ್ಲಿ ಇಬ್ಬರು ಸೇನಾಧಿಕಾರಿಗಳು ಮತ್ತು ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟ ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರನಾಗ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳ ಕಾರ್ಯಾಚರಣೆ ಮೂರನೇ ದಿನವಾದ ಶುಕ್ರವಾರವೂ ಮುಂದುವರಿದಿದೆ. ಬುಧವಾರ ಕಾರ್ಯಾಚರಣೆ ಸಂದರ್ಭ ನಾಪತ್ತೆಯಾಗಿದ್ದ ಯೋಧನೋರ್ವರ ಮೃತದೇಹ ಗುಂಡೇಟಿನ ಗಾಯಗಳೊಂದಿಗೆ ಶುಕ್ರವಾರ ಪತ್ತೆಯಾಗಿದೆ. ಮೃತ ಯೋಧನ ಗುರುತನ್ನು ಬಹಿರಂಗ ಪಡಿಸಲಾಗಿಲ್ಲ. ಇದರೊಂದಿಗೆ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಲ್ಲಿ ಮೃತ ಭದ್ರತಾ ಸಿಬ್ಬಂದಿಗಳ ಸಂಖ್ಯೆ ನಾಲ್ಕಕ್ಕೇರಿದೆ.
ಗಾರೋಲ್ ಅರಣ್ಯದಲ್ಲಿ ಬಚ್ಚಿಟ್ಟುಕೊಂಡಿರುವ ಭಯೋತ್ಪಾದಕರಿಗಾಗಿ ಭದ್ರತಾ ಪಡೆಗಳು ಬಲೆಯನ್ನು ಬೀಸಿದ್ದು,ವಿಶೇಷ ಪಡೆಗಳು ಸೇರಿದಂತೆ ಪ್ರಮುಖ ಭಯೋತ್ಪಾದನೆ ನಿಗ್ರಹ ದಳಗಳು ದುಷ್ಕರ್ಮಿಗಳಿಗಾಗಿ ಬೇಟೆಯಾಡುತ್ತಿವೆ.
ಬುಧವಾರ ಬೆಳಿಗ್ಗೆ ಭಯೋತ್ಪಾದಕರ ಹೊಂಚು ದಾಳಿಯಲ್ಲಿ 19 ರಾಷ್ಟ್ರೀಯ ರೈಫಲ್ಸ್ ನ ಕರ್ನಲ್ ಮನಪ್ರೀತ್ ಸಿಂಗ್ ಮತ್ತು ಮೇಜರ್ ಆಶಿಷ್ ಧೋನಚಕ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸ್ ನ ಡಿಎಸ್ಪಿ ಮುಹಮ್ಮದ್ ಹುಮಾಯೂನ್ ಮುಝಮಿಲ್ ಭಟ್ ಮೃತಪಟ್ಟಿದ್ದರು.
ಗುರುವಾರ ಹೆಚ್ಚಿನ ಪಡೆಗಳು ಸ್ಥಳವನ್ನು ತಲುಪಿದ್ದು, ಭದ್ರತಾ ಸಿಬ್ಬಂದಿಗಳು ಉಝೇರ್ ಖಾನ್ ಸೇರಿದಂತೆ ಲಷ್ಕರೆ ತೈಬಾದ ಇಬ್ಬರು ಭಯೋತ್ಪಾದಕರನ್ನು ಸುತ್ತುವರಿದಿದ್ದಾರೆ.
ದಾಳಿ ತಂಡಗಳು ಭಯೋತ್ಪಾದಕರ ಅಡಗುದಾಣವೆಂದು ನಂಬಲಾಗಿರುವ ಗುಹೆಯಂತಹ ರಚನೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದು, ಒಳಗಿದ್ದವರನ್ನು ತಟಸ್ಥಗೊಳಿಸಲು ತಮ್ಮ ಸ್ವಯಂಚಾಲಿತ ಅಸ್ತ್ರಗಳಿಂದ ಗುಂಡಿನ ಸುರಿಮಳೆಯನ್ನೇ ನಡೆಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಚಲನವಲನ ಮತ್ತು ಅವರು ಅಲ್ಲಿ ಅಡಗಿರುವ ಸಾಧ್ಯತೆಯ ಬಗ್ಗೆ ಗುಪ್ತಚರ ಮಾಹಿತಿಯನ್ನು ಸ್ವೀಕರಿಸಿದ್ದ ಸೇನೆ ಮತ್ತು ಪೊಲೀಸ್ ಸಿಬ್ಬಂದಿಗಳು ಮಂಗಳವಾರ ರಾತ್ರಿ ಜಂಟಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದರು.
ಶುಕ್ರವಾರ ಅರಣ್ಯ ಪ್ರದೇಶದಿಂದ ಭಾರೀ ಗುಂಡು ಹಾರಾಟ ಮತ್ತು ಗ್ರೆನೇಡ್ ಸ್ಫೋಟಗಳ ಶಬ್ದಗಳು ಕೇಳಿ ಬರುತ್ತಿದ್ದವು.
ಅರಣ್ಯದಲ್ಲಿ 2-3 ಭಯೋತ್ಪಾದಕರು ಬಚ್ಚಿಟ್ಟುಕೊಂಡಿದ್ದಾರೆ ಎಂದು ಭದ್ರತಾ ಪಡೆಗಳು ಶಂಕಿಸಿದ್ದು,ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರೆ ತೈಬಾದೊಂದಿಗೆ ಗುರುತಿಸಿಕೊಂಡಿರುವ ದಿ ರಸಿಸ್ಟನ್ಸ್ ಫ್ರಂಟ್ ಗೆ ಸೇರಿದವರಾಗಿದ್ದಾರೆ ಎನ್ನಲಾಗಿದೆ.
ಕಣ್ಗಾವಲು ಮತ್ತು ಶೋಧ ಕಾರ್ಯಾಚರಣೆಯಲ್ಲಿ ನೆರವಾಗಲು ಪ್ರದೇಶದಲ್ಲಿ ಹೆರಾನ್ ಡ್ರೋನ್ಗಳು ಮತ್ತು ಕ್ವಾಡ್ಕಾಪ್ಟರ್ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.







