ಗಿನ್ನೆಸ್ ದಾಖಲೆ ನಿರ್ಮಿಸಿದ ಅಂಡಮಾನ್ ತಂಡ: ಸಮುದ್ರದಡಿ 200 ಡೈವರ್ ಗಳಿಂದ 2,400 ಚದರ ಮೀಟರ್ ಅಗಲದ ತ್ರಿವರ್ಣ ಧ್ವಜ ಪ್ರದರ್ಶನ

ಸ್ವರಾಜ್ ದೀಪ್ (ಹ್ಯಾವ್ಲಾಕ್): ಅಂಡಮಾನ್ ಮತ್ತು ನಿಕೋಬಾರ್ ಆಡಳಿತವು ಸ್ವರಾಜ್ ದ್ವೀಪದ ರಾಧಾನಗರ ಬೀಚ್ ನಲ್ಲಿ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಲು ಕೈಗೊಂಡಿರುವ ಪ್ರಯತ್ನದ ಮೊದಲ ಹಂತ ಯಶಸ್ವಿಯಾಗಿದೆ.
ಮೇ 2ರಂದು ನಡೆದ ಕಾರ್ಯಕ್ರಮದಲ್ಲಿ, ಸುಮಾರು 200 ಡೈವರ್ ಗಳು ಸೇರಿ 2,400 ಚದರ ಮೀಟರ್ ವ್ಯಾಪ್ತಿಯ ಅತಿದೊಡ್ಡ ಭಾರತೀಯ ತ್ರಿವರ್ಣ ಧ್ವಜವನ್ನು ನೀರಿನ ಅಡಿಯಲ್ಲಿ ಪ್ರದರ್ಶಿಸಿದರು. ಬಳಿಕ ತೀರ್ಪುಗಾರ ರಿಷಿನಾಥ್ ಅವರು ಲೆಫ್ಟಿನೆಂಟ್ ಗವರ್ನರ್ ಡಿ.ಕೆ. ಜೋಶಿ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು.
ಮೇ 3ರಂದು ನಡೆಯಲಿರುವ ಎರಡನೇ ಹಂತದಲ್ಲಿ, ಡೈವರ್ ಗಳು ನೀರಿನೊಳಗೆ ಒಬ್ಬರ ಮೇಲೆ ಮತ್ತೊಬ್ಬರು ನಿಂತು ಸುಮಾರು 20 ಮೀಟರ್ ಎತ್ತರದ ಮಾನವ ಸರಪಳಿ ನಿರ್ಮಿಸಲು ಪ್ರಯತ್ನಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಡೈವ್ ಅಂಡಮಾನ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ, ಸ್ಥಳೀಯ ಡೈವಿಂಗ್ ಕೇಂದ್ರಗಳು ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದೆ.
ಅರಣ್ಯ ಇಲಾಖೆ, ಪೊಲೀಸ್, ನೌಕಾಪಡೆ ಸಿಬ್ಬಂದಿ ಹಾಗೂ ಪಿಎಡಿಐ/ಎಸ್‌ಎಸ್‌ಐ ಪ್ರಮಾಣೀಕೃತ ಸ್ಥಳೀಯ ಮತ್ತು ವೃತ್ತಿಪರ ಡೈವರ್‌ಗಳು ಈ ಪ್ರಯತ್ನದಲ್ಲಿ ಭಾಗವಹಿಸಿದ್ದಾರೆ.
ಸಾಗರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು, ಸಾಹಸ ಕ್ರೀಡೆಗಳತ್ತ ಯುವಕರನ್ನು ಪ್ರೇರೇಪಿಸುವುದು ಹಾಗೂ ಅಂಡಮಾನ್ ದ್ವೀಪಗಳನ್ನು ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮ ಕೇಂದ್ರವಾಗಿ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.






