Andhra Pradesh | ತರಗತಿಯೊಳಗೆ ಯಾಂತ್ರಿಕ ಗರಗಸ ಹಿಡಿದು ನುಗ್ಗಿ ವಿದ್ಯಾರ್ಥಿನಿಯರ ಮೇಲೆ ದಾಳಿ ನಡೆಸಿದ್ದ ಆರೋಪಿಗೆ ಪೊಲೀಸರಿಂದ ಗುಂಡೇಟು
ಬಂಧಿಸಲು ಹೋದ ಪೊಲೀಸರ ಮೇಲೆಯೇ ಚಾಕು, ಕಲ್ಲುಗಳಿಂದ ಹಲ್ಲೆ

Photo: fb.com/AskAnshul
ಅನಂತಪುರ: ಶಾಲೆಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಚಾಲನೆಯಲ್ಲಿದ್ದ ಯಾಂತ್ರಿಕ ಗರಗಸ ಬಳಸಿ ಭೀಕರ ದಾಳಿ ನಡೆಸಿದ್ದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಆತನನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆರು ಸುತ್ತು ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಆರೋಪಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
'ಡುಮ್ಮು' ಎಂದೂ ಕರೆಯಲ್ಪಡುವ ಹೇಮಂತ್ ಎಂಬಾತ ಅರಣ್ಯ ಪ್ರದೇಶವೊಂದರಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಆತನನ್ನು ವಶಕ್ಕೆ ಪಡೆಯಲು ಮುಂದಾದಾಗ ಚಾಕು ಹಿಡಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಅಲ್ಲದೆ, ಪೊಲೀಸರ ಮೇಲೆ ಕಲ್ಲುಗಳಿಂದ ದಾಳಿ ನಡೆಸಿದ್ದಾನೆ. ಆರೋಪಿಯನ್ನು ಬಂಧಿಸುವ ಪ್ರಯತ್ನದಲ್ಲಿ ಹಲವು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ಮೇಲೆ ಆರು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
*ತರಗತಿಯೊಳಗೆ ನುಗ್ಗಿ ದಾಳಿ
ಅನಂತಪುರ ಜಿಲ್ಲೆಯ ರಾಪ್ತಡು ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಅಕ್ಟೋಬರ್ 31ರಂದು ಬೆಳಿಗ್ಗೆ ಸುಮಾರು 10.30ರ ವೇಳೆಗೆ ಈ ಘಟನೆ ನಡೆದಿತ್ತು. ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾಗ ಚಾಲನೆಯಲ್ಲಿದ್ದ ಚೈನ್-ಸಾ ಹಿಡಿದುಕೊಂಡು ತರಗತಿಯೊಳಗೆ ನುಗ್ಗಿದ ಆರೋಪಿ, 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ದಾಳಿ ನಡೆಸಿದ್ದ.
ಸಹಪಾಠಿಗಳು ಮತ್ತು ಶಿಕ್ಷಕರ ಕಣ್ಣೆದುರೇ ನಡೆದ ಈ ದಾಳಿಯಿಂದ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಏನಾಗುತ್ತಿದೆ ಎಂಬುದು ತಿಳಿಯುವ ಮೊದಲೇ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆದಿತ್ತು. ವಿದ್ಯಾರ್ಥಿಗಳು ತೀವ್ರ ಭಯಭೀತರಾಗಿದ್ದರೆ, ಶಾಲಾ ಸಿಬ್ಬಂದಿಯೂ ಆಘಾತಕ್ಕೊಳಗಾಗಿದ್ದರು.
ದಾಳಿಯಲ್ಲಿ ಒಬ್ಬ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿವೆ. ಆಕೆಯ ಬಲಗೈ ಸಂಪೂರ್ಣವಾಗಿ ತುಂಡಾಗಿದ್ದು, ಕುತ್ತಿಗೆ ಮತ್ತು ಮುಖಕ್ಕೂ ಗಾಯಗಳಾಗಿವೆ. ತಲೆಬುರುಡೆ ಹಾಗೂ ಪಕ್ಕೆಲುಬುಗಳು ಮುರಿದಿವೆ. ರಕ್ತನಾಳಗಳಿಗೂ ಹಾನಿಯಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ವಿದ್ಯಾರ್ಥಿನಿಯರನ್ನು ಗೀತಿಕಾ ಮತ್ತು ಲಕ್ಷ್ಮಿ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಆರಂಭದಲ್ಲಿ ಅನಂತಪುರದ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ನೀಡಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.
ಕಾಮಗಾರಿಯ ಯಂತ್ರವೆಂದು ಭಾವಿಸಿದ್ದ ಶಿಕ್ಷಕರು
ಶಾಲಾ ಆವರಣದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಾರಣ, ದಾಳಿಕೋರ ತಂದಿದ್ದ ಯಂತ್ರದ ಶಬ್ದವನ್ನು ಆರಂಭದಲ್ಲಿ ಶಿಕ್ಷಕರು ಕಾಮಗಾರಿಗೆ ಸಂಬಂಧಿಸಿದ ಉಪಕರಣದ್ದೆಂದು ಭಾವಿಸಿದ್ದರು. ಅದು ಚೈನ್-ಸಾ ಎಂಬುದು ಅವರಿಗೆ ತಿಳಿದಿರಲಿಲ್ಲ.
ದಾಳಿಯನ್ನು ಕಣ್ಣಾರೆ ಕಂಡ ಶಿಕ್ಷಕಿ ರಾಜೇಶ್ವರಿ ಅವರು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.
'ತರಗತಿಗಳು ನಡೆಯುತ್ತಿದ್ದವು. ಮೊದಲ ಅವಧಿ ಮುಗಿದಿತ್ತು. ಪಾಠ ಮುಂದುವರಿದಿತ್ತು. ಎಲ್ಲ ಮಕ್ಕಳು ಓದುತ್ತಿದ್ದರು. ಒಬ್ಬ ಹುಡುಗ ಮಾತ್ರ ಬಂದನು. ಹೊರಗಿನಿಂದ ಮೋಟಾರ್ ಒಂದನ್ನು ಚಾಲನೆ ಮಾಡಿ, ನಂತರ ಒಳಗೆ ಬಂದನು. ಆ ಮೋಟಾರ್ ಯಾವ ರೀತಿಯ ಉಪಕರಣ ಎಂಬುದೇ ನಮಗೆ ಅರ್ಥವಾಗಲಿಲ್ಲ' ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಆಸನಗಳಲ್ಲಿ ಕುಳಿತಿದ್ದಾಗಲೇ ಆರೋಪಿ ತರಗತಿಯೊಳಗೆ ನುಗ್ಗಿದ್ದಾನೆ. ಏನಾಗುತ್ತಿದೆ ಎಂಬುದು ತಿಳಿಯುವ ಮೊದಲೇ ಮಕ್ಕಳತ್ತ ಧಾವಿಸಿದ್ದಾನೆ ಎಂದು ರಾಜೇಶ್ವರಿ ವಿವರಿಸಿದ್ದಾರೆ.
'ಶಾಲೆಯಲ್ಲಿ ಕಾಮಗಾರಿ ನಡೆಯುತ್ತಿದ್ದುದರಿಂದ ಕೆಲಸಗಾರರು ಯಾರೋ ಬಂದಿರಬಹುದು ಎಂದು ಭಾವಿಸಿದ್ದೆವು. ಆದರೆ, ಇದ್ದಕ್ಕಿದ್ದಂತೆ ಆತ ಮಕ್ಕಳ ನಡುವೆ ನುಗ್ಗಿದ. ಏನಾಗುತ್ತಿದೆ ಅಥವಾ ಏನು ಸಂಭವಿಸಿದೆ ಎಂಬುದು ಮಕ್ಕಳಿಗೆ ತಿಳಿಯುವ ಮೊದಲೇ ದಾಳಿ ನಡೆದಿತ್ತು. ಮಕ್ಕಳು ಎದ್ದು ಹೊರಗೆ ಹೋಗುವಷ್ಟರಲ್ಲಿ ಎಲ್ಲವೂ ಮುಗಿದಿತ್ತು. ಮಕ್ಕಳು ತರಗತಿಯೊಳಗಿದ್ದಾಗಲೇ ಆತ ಒಳಗೆ ಬಂದಿದ್ದ' ಎಂದು ಅವರು ತಿಳಿಸಿದ್ದಾರೆ.
10 ಯೂನಿಟ್ ರಕ್ತ ನೀಡಿದ ವೈದ್ಯರು
ಆಂಧ್ರಪ್ರದೇಶದ ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್ ಅವರು ವಿದ್ಯಾರ್ಥಿನಿಯ ಗಾಯಗಳ ತೀವ್ರತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆಕೆಯ ಬಲಗೈ ಸಂಪೂರ್ಣವಾಗಿ ತುಂಡಾಗಿದ್ದು, ಕುತ್ತಿಗೆ ಮತ್ತು ಮುಖದ ಭಾಗದಲ್ಲಿ ಗಾಯಗಳಾಗಿವೆ. ತಲೆಬುರುಡೆ ಹಾಗೂ ಪಕ್ಕೆಲುಬುಗಳು ಮುರಿದಿವೆ. ರಕ್ತನಾಳಗಳಿಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ಚಿಂತಾಜನಕ ಸ್ಥಿತಿಯಲ್ಲಿ ವಿದ್ಯಾರ್ಥಿನಿಯನ್ನು ಅನಂತಪುರ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಬೆಂಗಳೂರಿಗೆ ಸ್ಥಳಾಂತರಿಸುವ ಮೊದಲು ರಕ್ತಸ್ರಾವ ನಿಯಂತ್ರಿಸಲು ವೈದ್ಯರು ಆಕೆಗೆ 10 ಯೂನಿಟ್ ರಕ್ತ ನೀಡಿದ್ದರು.
ಅನಂತಪುರ ಸರ್ಕಾರಿ ಜನರಲ್ ಆಸ್ಪತ್ರೆಯ ಅಧೀಕ್ಷಕಿ ಡಿ. ಮಲ್ಲೇಶ್ವರಿ ಅವರು ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸಲ್ಲಿಸಿರುವ ವರದಿಯಲ್ಲಿ ವಿದ್ಯಾರ್ಥಿನಿಯ ಗಾಯಗಳ ಸಂಪೂರ್ಣ ವಿವರಗಳನ್ನು ದಾಖಲಿಸಿದ್ದಾರೆ.
ವಿದ್ಯಾರ್ಥಿನಿಯ ದೇಹದ ಹಲವು ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದವು (ಪಾಲಿಟ್ರಾಮಾ). ಹೆಚ್ಚಿನ ರಕ್ತಸ್ರಾವದಿಂದ ರಕ್ತದ ಪ್ರಮಾಣ ತೀವ್ರವಾಗಿ ಕುಸಿದು ಹೈಪೊವೊಲೆಮಿಕ್ ಆಘಾತ ಉಂಟಾಗಿತ್ತು. ಶ್ವಾಸಕೋಶದ ಸುತ್ತ ಗಾಳಿ ಸಂಗ್ರಹವಾಗುವ ನ್ಯೂಮೋಥೊರಾಕ್ಸ್ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಮುಖದ ಹಲವು ಮೂಳೆಗಳು ಮುರಿದಿದ್ದವು. ಮೇಲಿನ ತೋಳಿನ ಮೂಳೆಯಾದ ಪ್ರಾಕ್ಸಿಮಲ್ ಹ್ಯೂಮರಸ್ ನಲ್ಲಿಯೂ ಮುರಿತವಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಎರಡೂ ಭುಜಗಳ ಹಿಂಭಾಗದಲ್ಲಿರುವ ಸ್ಕ್ಯಾಪುಲಾ ಮೂಳೆಗಳು ಮುರಿದಿದ್ದವು. ಎಡ ಮುಂಗೈಯ ಸ್ನಾಯುರಜ್ಜುಗಳಿಗೆ ಹಾನಿಯಾಗಿತ್ತು. ನೆತ್ತಿ, ಮುಖ, ಕುತ್ತಿಗೆ, ಭುಜದ ಹಿಂಭಾಗ, ಕಿವಿ ಮತ್ತು ಕಣ್ಣುರೆಪ್ಪೆಗಳಲ್ಲಿಯೂ ಹಲವು ಗಾಯಗಳಾಗಿದ್ದವು ಎಂದು ವೈದ್ಯಕೀಯ ವರದಿ ದಾಖಲಿಸಿದೆ.
ಸೌಜನ್ಯ: NDTV






