Andhra Pradesh | ಬಸ್-ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ: ಕನಿಷ್ಠ 14 ಮಂದಿ ಮೃತ್ಯು, 23 ಜನರಿಗೆ ಗಾಯ

PC: X/@TheSiasatDaily
ಹೊಸದಿಲ್ಲಿ,ಮಾ.26: ಆಂಧ್ರಪ್ರದೇಶದ ಮರಕಪುರಂ ಪ್ರದೇಶದಲ್ಲಿ ಗುರವಾರ 37ಕ್ಕೂ ಅಧಿಕ ಪ್ರಯಾಣಿಕರಿದ್ದ ಬಸ್ಸೊಂದು ಜಲ್ಲಿ ತುಂಬಿದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಹಾಗೂ 23 ಮಂದಿ ಗಾಯಗೊಂಡಿದ್ದಾರೆ. ಅವಘಡದ ತೀವ್ರತೆಯಿಂದಾಗಿ ಬಸ್ಗೆ ಬೆಂಕಿ ಹತ್ತಿಕೊಂಡಿದ್ದರಿಂದ ಹಲವಾರು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಬಸ್ ತೆಲಂಗಾಣದ ಜಗತಿಯಾಲ್ ನಿಂದ ನೆಲ್ಲೂರ್ ಜಿಲ್ಲೆಯ ಕಾಲಿಗಿರಿಯತ್ತ ಪ್ರಯಾಣಿಸುತ್ತಿದ್ದಾಗ ಅವಘಡ ಸಂಭವಿಸಿದೆ.
ಘಟನೆಯ ಸುದ್ದಿತಿಳಿಯುತ್ತಿದ್ದಂತೆಯೇ ಜಿಲ್ಲಾಳಿತವು ದುರಂತದ ಸ್ಥಳಕ್ಕೆ ಹಲವಾರು ರಕ್ಷಣಾ ತಂಡಗಳನ್ನು ರವಾನಿಸಿದೆ. ಹೊತ್ತಿ ಉರಿಯುತ್ತಿದ್ದ ಬಸ್ನೊಳಗೆ ಸಿಲುಕಿಕೊಂಡಿದ್ದ ಹಲವಾರು ಮಂದಿಯನ್ನು ರಕ್ಷಣಾ ತಂಡಗಳು ಸ್ಥಳೀಯರ ನೆರವಿನೊಂದಿಗೆ ಹೊರಕ್ಕೆ ತಂದಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
23 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಪೂರ್ಣ ವಿವರಗಳನ್ನು ಕಲೆಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಮರ್ಕಪುರಂ ಪೊಲೀಸ್ ಅಧೀಕ್ಷಕ ವಿ.ಹರ್ಷವರ್ಧನ ರಾಜು ಅವರು ತಿಳಿಸಿದ್ದಾರೆ.
ಮೃತರ ಬಂಧುಗಳ ವಿವರಗಳನ್ನು ಸಂಗ್ರಹಿಸಲು ರಕ್ಷಣಾ ತಂಡಗಳು ಶ್ರಮಿಸುತ್ತಿವೆ. ಎಲ್ಲಾ ವಿವರಗಳನ್ನು ಹಾಗೂ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹಗಳನ್ನು ಬಂಧುಗಳಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







