Andhra Pradesh | ಜೆಲಟಿನ್ ಕಡ್ಡಿಗಳ ಸ್ಫೋಟ; ಐವರು ಮೃತ್ಯು

Photo Credit : x
ಪಾಡೇರು, ಅ. 24: ಆಂಧ್ರಪ್ರದೇಶದ ಅನಂತಗಿರಿ ಮಂಡಲದ ಗುಮ್ಮಂತಿ ಗ್ರಾಮದಲ್ಲಿ ಶನಿವಾರ ವಾಹನದಲ್ಲಿ ಸಾಗಿಸುತ್ತಿದ್ದ ಜೆಲಟಿನ್ ಕಡ್ಡಿಗಳು ಸ್ಫೋಟಗೊಂಡು ಶಾಲಾ ಶಿಕ್ಷಕಿ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ಗುಡ್ಡದ ಮೇಲೆ ರಸ್ತೆ ನಿರ್ಮಿಸಲಾಗುತ್ತಿತ್ತು. ಈ ಯೋಜನೆಗೆ ಸಂಬಂಧಿಸಿದ ಸ್ಫೋಟದ ಕೆಲಸಕ್ಕಾಗಿ ವಾಹನದಲ್ಲಿ ಜೆಲಟಿನ್ ಕಡ್ಡಿಗಳನ್ನು ಸಾಗಿಸಲಾಗುತ್ತಿತ್ತು. ವಾಹನದಲ್ಲಿ ಡೀಸೆಲ್ ಖಾಲಿಯಾಗಿದ್ದು, ಇಂಧನ ತುಂಬಿಸುವಾಗ ಸ್ಫೋಟ ಸಂಭವಿಸಿ ಈ ದುರಂತ ನಡೆದಿದೆ.
ಮೃತರನ್ನು ಶಾಲಾ ಶಿಕ್ಷಕಿ ಸುನಿತಾ, ಚಾಲಕ ಪವನ್ ಕುಮಾರ್ ಹಾಗೂ ರಸ್ತೆ ನಿರ್ಮಾಣ ಕಾರ್ಮಿಕರಾದ ನಾರಾಯಣ ರಾವ್, ಮಣಿ ಎಂದು ಗುರುತಿಸಲಾಗಿದೆ . ಇನ್ನೊಬ್ಬ ವ್ಯಕ್ತಿ ಯನ್ನು ಇದುವರಗೆ ಗುರುತಿಸಲಾಗಿಲ್ಲ . ಶಾಲಾ ಶಿಕ್ಷಕಿ ಸುನಿತಾ ಅನಂತಗಿರಿಯ ಎಂಪಿಪಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಅವರು ಅದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದರು.
ಸ್ಫೋಟದ ತೀವ್ರತೆಗೆ ಮೃತದೇಹಗಳು ಚೂರುಚೂರಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮೃತಪಟ್ಟವರೆಲ್ಲರ ದೇಹಗಳು ಗುರುತು ಹಿಡಿಯಲಾಗದಷ್ಟು ಛಿದ್ರಗೊಂಡಿದ್ದವು.
ಈ ಘಟನೆಗೆ ಆಂಧ್ರಪ್ರದೇಶದ ಗೃಹ ಸಚಿವೆ ವಂಗಲಪೂಡಿ ಅನಿತಾ ತೀವ್ರ ಶೋಕ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅನಿತಾ ಅವರು ಅಲ್ಲೂರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರೊಂದಿಗೆ ಮಾತನಾಡಿ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.




