ʼಮೂರನೇ ಮಗುವಿಗೆ 25,000 ರೂ.ʼ: ದೇಶದ ಮೊದಲ ಕರಡು ಜನಸಂಖ್ಯೆ ನಿರ್ವಹಣೆ ನೀತಿ ಅನಾವರಣಗೊಳಿಸಿದ ಆಂಧ್ರಪ್ರದೇಶ ಸರಕಾರ

ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು | Photo Credit : PTI
ವಿಜಯವಾಡಾ: ದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದಿರುವಂತೆ ಪ್ರೋತ್ಸಾಹಿಸಲು ಆಂಧ್ರಪ್ರದೇಶ ಸರಕಾರವು ದೇಶದ ಮೊದಲ ಜನಸಂಖ್ಯೆ ನಿರ್ವಹಣೆ ನೀತಿಯನ್ನು ಪ್ರಕಟಿಸಿದೆ. ಇದರಲ್ಲಿ ಮೂರನೇ ಮಗುವಿಗೆ ಜನ್ಮ ನೀಡುವ ದಂಪತಿಗಳಿಗೆ 25,000 ರೂ.ಪಾವತಿಸುವ ಯೋಜನೆಯು ಸೇರಿದೆ.
ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಕರಡು ನೀತಿಯನ್ನು ಪ್ರಕಟಿಸಿದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು, ನೀತಿಯು ಎ.1ರಿಂದ ಜಾರಿಗೊಳ್ಳುವಂತಾಗಲು ಮಾರ್ಚ್ ಅಂತ್ಯದೊಳಗೆ ಅದನ್ನು ಅಂತಿಮಗೊಳಿಸಲು ರಾಜ್ಯ ಸರಕಾರವು ಪ್ರಯತ್ನಿಸಲಿದೆ ಎಂದು ತಿಳಿಸಿದರು.
ಇತರ ಪ್ರೋತ್ಸಾಹಕಗಳಲ್ಲಿ ಮೂರನೇ ಮಗುವಿಗೆ 18 ವರ್ಷ ಪ್ರಾಯದವರೆಗೆ ಉಚಿತ ಶಿಕ್ಷಣ, ಸಬ್ಸಿಡಿ ದರಗಳಲ್ಲಿ ಐವಿಎಫ್ (ಕೃತಕ ಗರ್ಭಧಾರಣೆ) ಸೇವೆಗಳು,ಮೂರನೇ ಮಗುವಿಗೆ ಜನ್ಮ ನೀಡುವ ದಂಪತಿಗಳಿಗೆ ವಿಶೇಷ ರಜೆಗಳ ಮಂಜೂರು,ಉದ್ಯೋಗಿ ಮಹಿಳೆಯರಿಗಾಗಿ ಹಾಸ್ಟೆಲ್ಗಳು ಮತ್ತು ಮಕ್ಕಳ ಆರೈಕೆ ಕೇಂದ್ರಗಳ ನಿರ್ಮಾಣ ಸೇರಿವೆ.
ಕರಡು ನೀತಿಯು ದಂಪತಿಗಳ ಮೂರನೇ ಅಥವಾ ನಂತರದ ಮಗುವಿನ ಜನನ ಸಮಯದಲ್ಲಿ 12 ತಿಂಗಳುಗಳ ಮಾತೃತ್ವ ರಜೆಯನ್ನೂ ಪ್ರಸ್ತಾವಿಸಿದ್ದು,ಇದರಲ್ಲಿ ತಂದೆಗೆ ಎರಡು ತಿಂಗಳ ಪಿತೃತ್ವ ರಜೆಯೂ ಸೇರಿದೆ. ನಿವೃತ್ತಿ ಸಮೀಪಿಸುತ್ತಿರುವ,ಮೂವರು ಮಕ್ಕಳನ್ನುಹೊಂದಿರುವ ಸರಕಾರಿ ನೌಕರರಿಗೆ 15 ದಿನಗಳ ಯೋಗಕ್ಷೇಮ ರಜೆಯ ಜೊತೆಗೆ 50,000 ರೂ.ಗಳ ಆರೋಗ್ಯ ನಿಧಿಯನ್ನೂ ನೀಡಲಾಗುವುದು
ಹಂಚಿಕೆಯ ಕುಟುಂಬ ಜವಾಬ್ದಾರಿಗಳನ್ನು ಉತ್ತೇಜಿಸಲು ಸರಕಾರವು ‘ಪೋಷಕರ ಸಮಾನ ಜವಾಬ್ದಾರಿ’ ಎಂಬ ಜಾಗ್ರತಿ ಅಭಿಯಾನವನ್ನೂ ಆರಂಭಿಸಲಿದೆ.
ನೂತನ ನೀತಿಗೆ ಕಾರಣಗಳನ್ನು ವಿವರಿಸಿದ ನಾಯ್ಡು, ಆಂಧ್ರಪ್ರದೇಶದಲ್ಲಿ 1993ರಲ್ಲಿ 3.0ರಷ್ಟಿದ್ದ ಒಟ್ಟು ಫಲವಂತಿಕೆ ದರವು 1.4ಕ್ಕೆ ಇಳಿದಿದೆ. ಫಲವಂತಿಕೆ ದರದಲ್ಲಿ ಕುಸಿತವು ಕೆಲಸ ಮಾಡುವ ಯುವಜನರ ಸಂಖ್ಯೆ ತಗ್ಗುವುದರೊಂದಿಗೆ ಆರ್ಥಿಕ ಬೆಳವಣಿಗೆಗೆ ಬೆದರಿಕೆಯನ್ನೊಡ್ಡಿದೆ ಮತ್ತು ರಾಜ್ಯವು ಜಪಾನ್, ದಕ್ಷಿಣ ಕೊರಿಯಾ ಮತ್ತು ಇಟಲಿಗಳಂತೆ ವಯಸ್ಸಾಗುವಿಕೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
2023ರ ಅಂದಾಜುಗಳಂತೆ ರಾಜ್ಯದಲ್ಲಿ ವಾರ್ಷಿಕ 6.7 ಲಕ್ಷ ಜನನಗಳು ದಾಖಲಾಗುತ್ತವೆ. ಈ ದರದಲ್ಲಿ 2047ರ ವೇಳೆಗೆ ಆಂಧ್ರಪ್ರದೇಶದ ಶೇ.23ರಷ್ಟು ಜನರು ವೃದ್ಧರಾಗಬಹುದು ಎಂದು ನಾಯ್ಡು ತಿಳಿಸಿದರು.
ಜನಸಂಖ್ಯಾ ನಿರ್ವಹಣೆ ನೀತಿಯಡಿ ಮಕ್ಕಳ ಆರೈಕೆ ಶಿಕ್ಷಕರಿಗೆ ವಿಶೇಷ ತರಬೇತಿಯನ್ನು ಒದಗಿಸಲಾಗುವುದು. ಮೂರನೇ ಮಗುವಿನ ಜನನವನ್ನು ಪ್ರೋತ್ಸಾಹಿಸಲು ಪೋಷಣಾ-ಶಿಕ್ಷಾ-ಸುರಕ್ಷಾ ಪ್ಯಾಕೇಜ್ನಡಿ 25,000 ರೂ.ಗಳನ್ನು ಪಾವತಿಸಲಾಗುವದು. ಹೆಚ್ಚುವರಿಯಾಗಿ ಮೂರನೇ ಮಗುವಿಗೆ ಮಾಸಿಕ 1,000 ರೂ.ಗಳನ್ನು ನೀಡಲಾಗುವುದು ಎಂದರು.
ಸರಕಾರವು ಈಗಾಗಲೇ ಮಕ್ಕಳ ಸಂಖ್ಯೆಯನ್ನು ಲೆಕ್ಕಿಸದೆ ಜನಸಂಖ್ಯೆ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ತಲ್ಲಿಕಿ ವಂದನಂ ಯೋಜನೆಯಡಿ(ಶಾಲೆಯಲ್ಲಿ ಓದುತ್ತಿರುವ ಮಕ್ಕಳ ತಾಯಂದಿರಿಗೆ ಪ್ರತಿ ಮಗುವಿಗೆ 15,000 ರೂ.ಪಾವತಿ) ಹಣಕಾಸು ನೆರವನ್ನು ಒದಗಿಸುತ್ತಿದೆ.







