ಮಹಾರಾಷ್ಟ್ರ | ಭೀಡ್ ಸರ್ಪಂಚ್ ಹತ್ಯೆ ಪ್ರಕರಣದಲ್ಲಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳೊಂದಿಗೆ ಹೋಳಿ ಸಂಭ್ರಮಿಸಿದ ನ್ಯಾಯಾಧೀಶರು!
ಕಳವಳಕಾರಿಯೆಂದ ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ

PC : X
ಮುಂಬೈ: ಶುಕ್ರವಾರ ಮುಂಬೈನ ಹೌಸಿಂಗ್ ಸೊಸೈಟಿಯೊಂದರ ಆವರಣದಲ್ಲಿ ಹೋಳಿಯಾಡುತ್ತಿದ್ದ ಗುಂಪಿನ ಚಿತ್ರಗಳು ಮತ್ತು ವೀಡಿಯೊವನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಅವರು, ಮಸಾಜೋಗ್ ಸರಪಂಚ್ ಸಂತೋಷ್ ದೇಶಮುಖ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಪ್ರಕರಣದಲ್ಲಿ ಕರ್ತವ್ಯಲೋಪಕ್ಕಾಗಿ ಅಮಾನತುಗೊಂಡ ಇಬ್ಬರು ಪೋಲಿಸ್ ಅಧಿಕಾರಿಗಳೊಂದಿಗೆ ಹೋಳಿಯಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಎಕ್ಸ್ನಲ್ಲಿ ಎರಡು ಚಿತ್ರಗಳು ಮತ್ತು ಎರಡು ಸೆಕೆಂಡ್ ಅವಧಿಯ ವೀಡಿಯೊವನ್ನು ಪೋಸ್ಟ್ ಮಾಡಿರುವ ದಮಾನಿಯಾ,‘ದಯವಿಟ್ಟು ಈ ಚಿತ್ರಗಳನ್ನು ಪರಿಶೀಲಿಸಿ, ಆದರೆ ನನಗೆ ಬಂದಿರುವ ಮಾಹಿತಿಯ ಪ್ರಕಾರ ದೇಶಮುಖ ಕೊಲೆ ಪ್ರಕರಣದಲ್ಲಿ ಅಮಾನತುಗೊಂಡಿರುವ ಪಿಎಸ್ಐ ರಾಜೇಶ್ ಪಾಟೀಲ್ ಮತ್ತು ಅದೇ ಪ್ರಕರಣದಲ್ಲಿ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿರುವ ಇನ್ಸ್ಪೆಕ್ಟರ್ ಪ್ರಶಾಂತ್ ಮಹಾಜನ್ ಹೋಳಿ ಆಚರಿಸುತ್ತಿರುವುದನ್ನು ಕಾಣಬಹುದು. ಆದರೆ ಯಾರೊಂದಿಗೆ? ದೇಶಮುಖ್ ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಧೀರ್ ಭಾಜಿಪಾಲೆ ಅವರೊಂದಿಗೆ!’ ಎಂದು ಬರೆದಿದ್ದಾರೆ.
ಈಗ ನ್ಯಾಯಾಧೀಶರು ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿದ್ದ ಅಧಿಕಾರಿಗಳೊಂದಿಗೆ ಹೋಳಿ ಆಡುತ್ತಿದ್ದರೆ ಅದು ಸಂಪೂರ್ಣವಾಗಿ ತಪ್ಪು ಎಂದು ಬರೆಯುವ ಮೂಲಕ ದಮಾನಿಯಾ ಸರಕಾರದ ಗಮನವನ್ನು ಸೆಳೆದಿದ್ದಾರೆ.
ಅಂದ ಹಾಗೆ ಗುಂಪಿನ ಭಾಗವಾಗಿ ಚಿತ್ರದಲ್ಲಿರುವ ಮೂವರು ವ್ಯಕ್ತಿಗಳು ಪರಸ್ಪರ ಬಣ್ಣ ಹಚ್ಚುತ್ತಿರುವುದು ಅದರಲ್ಲಿ ಕಂಡುಬಂದಿಲ್ಲ. ಈ ಚಿತ್ರಗಳ ಸತ್ಯಾಸತ್ಯತೆಯನ್ನು ಅಥವಾ ಅವುಗಳನ್ನು ಯಾವಾಗ ತೆಗೆಯಲಾಗಿತ್ತು ಎನ್ನುವುದನ್ನು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಲು ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ.
ಕಳೆದ ಕೆಲವು ವಾರಗಳಲ್ಲಿ, ಬೀಡ್ ಉಸ್ತುವಾರಿ ಸಚಿವ ಧನಂಜಯ್ ಮುಂಡೆಯವರು ರಾಜೀನಾಮೆ ಸಲ್ಲಿಸುವ ಮುನ್ನ ಅವರ ಮತ್ತು ದೇಶಮುಖ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಅವರ ಆಪ್ತ ವಾಲ್ಮೀಕ್ ಕರಾಡ್ ವಿರುದ್ಧ ಅಭಿಯಾನದ ನೇತೃತ್ವವನ್ನು ದಮಾನಿಯಾ ವಹಿಸಿದ್ದರು. ಕರಾಡ್ ವಿರುದ್ಧದ ಹಿಂದಿನ ಎಲ್ಲ ಪ್ರಕರಣಗಳಿಗೆ ಮರುಜೀವ ನೀಡುವಂತೆ ಅವರು ಆಗ್ರಹಿಸುತ್ತಿದ್ದಾರೆ.
ಸುದ್ದಿಸಂಸ್ಥೆಯು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೋರ್ವರನ್ನು ಸಂಪರ್ಕಿಸಿದಾಗ, ಈ ಹಂತದಲ್ಲಿ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರೆ, ಬೀಡ್ ಎಸ್ಪಿ ನವನೀತ್ ಕನ್ವತ್ ಅವರು, ‘ಚಿತ್ರಗಳಲ್ಲಿ ಮತ್ತು ವೀಡಿಯೊದಲ್ಲಿ ಕಂಡು ಬಂದಿರುವ ವ್ಯಕ್ತಿಗಳು ಖಾಸಗಿ ಬದುಕುಗಳನ್ನು ಹೊಂದಿದ್ದಾರೆ ಮತ್ತು ಅವು ಇಂದಿನದೋ ಅಥವಾ ಹಿಂದಿನ ವರ್ಷದ್ದೋ ಎನ್ನುವುದೂ ನಮಗೆ ತಿಳಿದಿಲ್ಲ ’ ಎಂದು ಹೇಳಿದರು.







