2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಮಲೈ ಸ್ಪರ್ಧಿಸುವುದಿಲ್ಲ : ವರದಿ

Photo | indiatoday
ಚೆನ್ನೈ : ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿರುವ ಬಗ್ಗೆ indiatoday ವರದಿ ಮಾಡಿದೆ.
ಬಿಜೆಪಿ ಅಣ್ಣಾಮಲೈ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ನಿರೀಕ್ಷೆಯಿದೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ದಿಲ್ಲಿಯಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಣ್ಣಾಮಲೈಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಜವಾಬ್ಧಾರಿಯ ಬಗ್ಗೆ ಸುಳಿವು ನೀಡುತ್ತಿರುವುದು ಇದೇ ಮೊದಲಲ್ಲ. ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಅಮಿತ್ ಶಾ ಅಣ್ಣಾಮಲೈಗೆ ಶ್ಲಾಘಿಸಿದ್ದರು. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ ಅಣ್ಣಾಮಲೈ ಶ್ಲಾಘನೀಯ ಸಾಧನೆಗಳನ್ನು ಮಾಡಿದ್ದಾರೆ. ಅವರ ಸಂಘಟನಾ ಕೌಶಲ್ಯವನ್ನು ಪಕ್ಷದ ರಾಷ್ಟ್ರೀಯ ಚೌಕಟ್ಟಿನಲ್ಲಿ ಬಳಸಿಕೊಳ್ಳುತ್ತೇವೆ. ತಮಿಳುನಾಡಿನಲ್ಲಿ ಪಕ್ಷವನ್ನು ವಿಸ್ತರಿಸುವಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳನ್ನು ತಳಮಟ್ಟಕ್ಕೆ ಕೊಂಡೊಯ್ಯುವಲ್ಲಿ ಅವರ ಪ್ರಯತ್ನಗಳು ಶ್ಲಾಘನೀಯ ಎಂದು ಅಮಿತ್ ಶಾ ಹೇಳಿದ್ದರು.







