ಎಐಎಡಿಎಂಕೆಗೆ ಮತ್ತೊಂದು ಆಘಾತ: TVK ಸೇರ್ಪಡೆಯಾದ ಮೂವರು ಮಾಜಿ ಸಚಿವರು

ತಮಿಳುನಾಡು ಸಿಎಂ ವಿಜಯ್ , ಇ.ಪಳನಿಸ್ವಾಮಿ | Photo Credit : PTI
ಚೆನ್ನೈ: ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆಗೆ ಮತ್ತೊಂದು ಆಘಾತ ಎದುರಾಗಿದ್ದು, ಪಕ್ಷದ ಮೂವರು ಮಾಜಿ ಸಚಿವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಆಡಳಿತಾರೂಢ ಟಿವಿಕೆ ಪಕ್ಷವನ್ನು ಗುರುವಾರ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಮಾಜಿ ಸಚಿವರಾದ ಡಾ. ಸಿ. ವಿಜಯಭಾಸ್ಕರ್, ಎಂ.ಎಸ್.ಎಂ.ಆನಂದನ್ ಮತ್ತು ಎಂ.ಆರ್.ವಿಜಯಭಾಸ್ಕರ್ ಟಿವಿಕೆ ಸೇರ್ಪಡೆಯಾಗಿರುವ ಪ್ರಮುಖ ನಾಯಕರು.
ಟಿವಿಕೆ ಸೇರ್ಪಡೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಆರೋಗ್ಯ ಸಚಿವ ಡಾ. ಸಿ.ವಿಜಯಭಾಸ್ಕರ್, “ನಾವು ಈ ತೀರ್ಮಾನವನ್ನು ತರಾತುರಿಯಲ್ಲಿ ಕೈಗೊಂಡಿಲ್ಲ. ನಮ್ಮ ಬೆಂಬಲಿಗರು, ಜಿಲ್ಲಾ ಪದಾಧಿಕಾರಿಗಳು ಹಾಗೂ ನಮ್ಮ ವಿಧಾನಸಭಾ ಕ್ಷೇತ್ರಗಳ ಮತದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಎಐಎಡಿಎಂಕೆ ನಾಯಕತ್ವದ ತಪ್ಪು ನಿರ್ಧಾರಗಳೇ ತಾವು ಪಕ್ಷ ತೊರೆಯಲು ಪ್ರಮುಖ ಕಾರಣ ಎಂದು ಅವರು ದೂರಿದ್ದಾರೆ.
45 ವರ್ಷಗಳ ಕಾಲ ಎಐಎಡಿಎಂಕೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಮಾಜಿ ಸಚಿವ ಎಂ.ಎಸ್.ಎಂ.ಆನಂದನ್ ಅವರು ತಮ್ಮ ಪಕ್ಷದ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಇ.ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಳನಿಸ್ವಾಮಿ ನೇತೃತ್ವದಲ್ಲಿ ಎಐಎಡಿಎಂಕೆ ಸ್ವಾರ್ಥ ಸಂಘಟನೆಯಾಗಿ ಬದಲಾಗಿದೆ. ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.






