SIR | ಕರಡು ಪಟ್ಟಿಯಿಂದ ಕೈಬಿಟ್ಟ ಮತದಾರರ ಮರುಸೇರ್ಪಡೆಗೆ ಚುನಾವಣಾ ಆಯೋಗದಿಂದ ಮತ್ತೊಂದು ಅವಕಾಶ

ಚುನಾವಣಾ ಆಯೋಗ | Photo Credit : PTI
ಹೊಸದಿಲ್ಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರಿಗೆ ಮತ್ತೆ ಹೆಸರು ಸೇರ್ಪಡೆಗೊಳಿಸಲು ಭಾರತೀಯ ಚುನಾವಣಾ ಆಯೋಗ (ECI) ಮತ್ತೊಂದು ಅವಕಾಶ ನೀಡಿದೆ.
ದಿಲ್ಲಿ, ಮಹಾರಾಷ್ಟ್ರ ಸೇರಿದಂತೆ ಏಳು ರಾಜ್ಯಗಳಲ್ಲಿ 'ಅನುಪಸ್ಥಿತರು', 'ಸ್ಥಳಾಂತರಗೊಂಡವರು', 'ಮೃತಪಟ್ಟವರು' ಅಥವಾ 'ನಕಲಿ' (ASDD) ಎಂದು ಗುರುತಿಸಲ್ಪಟ್ಟ ಮತದಾರರು ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಹೊಸದಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನಮೂನೆ 6 ಸಲ್ಲಿಸುವುದು ಕಡ್ಡಾಯವಲ್ಲ. ಈ ಹಿಂದಿನ ಎಣಿಕೆ ನಮೂನೆಯನ್ನೇ ನಿಗದಿತ ಘೋಷಣೆಯೊಂದಿಗೆ ಮರುಭರ್ತಿ ಮಾಡಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ನವೆಂಬರ್ 6ರಂದು ದಿಲ್ಲಿ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಮತ್ತು ನಾಗಾಲ್ಯಾಂಡ್ನ ಮುಖ್ಯ ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಆಯೋಗ ಈ ನಿರ್ದೇಶನ ನೀಡಿದೆ.
ASDD ಎಂದು ಗುರುತಿಸಲ್ಪಟ್ಟು, ಎಣಿಕೆ ನಮೂನೆಗಳನ್ನು ಹಿಂದಿರುಗಿಸದ ಕಾರಣ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ಮತದಾರರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗುವುದು. ಇಂತಹ ಮತದಾರರ ಬೂತ್ವಾರು ಪಟ್ಟಿಗಳನ್ನು ಆಯಾ ಮತಗಟ್ಟೆಗಳ ಸೂಚನಾ ಫಲಕಗಳಲ್ಲಿ ಮತ್ತೊಮ್ಮೆ ಪ್ರದರ್ಶಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅರ್ಜಿಗಳು ಅಂಗೀಕಾರಗೊಂಡರೆ ಮತದಾರರಿಗೆ ಈ ಹಿಂದೆ ನೀಡಲಾಗಿದ್ದ ಚುನಾವಣಾ ಗುರುತಿನ ಚೀಟಿ (EPIC) ಸಂಖ್ಯೆಯನ್ನೇ ಮುಂದುವರಿಸಲಾಗುತ್ತದೆ. ಅಂದರೆ, ಅವರನ್ನು ಹೊಸ ಮತದಾರರೆಂದು ಪರಿಗಣಿಸದೆ, ಈಗಾಗಲೇ ನೋಂದಾಯಿಸಿಕೊಂಡಿರುವ ಮತದಾರರೆಂದೇ ಪರಿಗಣಿಸಲಾಗುತ್ತದೆ.
ಮತದಾರರ ಪಟ್ಟಿಯಿಂದ ಒಟ್ಟು 13.4 ಕೋಟಿ ಜನರನ್ನು ಕೈಬಿಡಲಾಗಿದ್ದು, ಅವರಲ್ಲಿ ಸುಮಾರು 13 ಕೋಟಿ ಮಂದಿ ASDD ವರ್ಗಕ್ಕೆ ಸೇರಿದವರಾಗಿದ್ದಾರೆ.






