ಕೋಟಾ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ (Photo: PTI)
ಕೋಟಾ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ವಿಜ್ಞಾನ ನಗರ ಪ್ರದೇಶದಲ್ಲಿ ನಡೆದಿದೆ. ವಿದ್ಯಾರ್ಥಿನಿ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ನೀಟ್ ತಯಾರಿ ನಡೆಸುತ್ತಿದ್ದ ಜಾರ್ಖಂಡ್ ಮೂಲದ ರಿಚಾ ಸಿನ್ಹಾ ಮಂಗಳವಾರ ತಡರಾತ್ರಿ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮಂಗಳವಾರ ರಾತ್ರಿ 10.30ರ ಸುಮಾರಿಗೆ ಸಿನ್ಹಾ ಸಾವಿನ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ವಿಜ್ಞಾನನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಹಾಯಕ ಅಮರ್ ಚಂದ್ ತಿಳಿಸಿದ್ದಾರೆ.
ಜಾರ್ಖಂಡ್ನ ರಾಂಚಿ ಮೂಲದ ಸಿನ್ಹಾ 11 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ನಗರದ ಕೋಚಿಂಗ್ ಇನ್ಸ್ಟಿಟ್ಯೂಟ್ಗೆ ದಾಖಲಾಗಿದ್ದಳು. ಆಕೆ ಈ ವರ್ಷದ ಆರಂಭದಲ್ಲಿ ಕೋಟಾಕ್ಕೆ ಬಂದಿದ್ದಳು ಎಂದು ಅವರು ತಿಳಿಸಿದ್ದಾರೆ.
ಆಕೆಯ ಕೊಠಡಿಯಿಂದ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಮತ್ತು ಆತ್ಮಹತ್ಯೆಯ ಹಿಂದಿನ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಚಂದ್ ಹೇಳಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಬಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕೋಟಾದಲ್ಲಿ ಈ ವರ್ಷ ಕೋಚಿಂಗ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ 23ನೇ ಪ್ರಕರಣ ಇದಾಗಿದೆ. ಕಳೆದ ವರ್ಷ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.







