CJP ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮ; ನಿರ್ದೇಶಕ ಅನುರಾಗ್ ಕಶ್ಯಪ್ ಸೇರಿದಂತೆ ಚಿತ್ರರಂಗದ ಗಣ್ಯರಿಂದ ಖಂಡನೆ

Photo Credt: indianexpres
ಹೊಸದಿಲ್ಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜು.20ರಂದು ನಡೆದ ‘ಚಲೋ ಸಂಸತ್’ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ದಿಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗ ಮಾಡಿರುವ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸ್ ಕ್ರಮದ ವಿರುದ್ಧ ಖಂಡನೆ ವ್ಯಕ್ತವಾಗಿದ್ದು, ಖ್ಯಾತ ಚಲನಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್, ಹಾಸ್ಯನಟ ಹಾಗೂ ನಟ ವೀರ್ ದಾಸ್, ನಟ ರಿತೇಶ್ ದೇಶ್ಮುಖ್, ನಟಿ ಜೆನಿಲಿಯಾ ದೇಶ್ಮುಖ್ ಮತ್ತು ನಟಿ ಹುಮಾ ಖುರೇಷಿ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಸಾರ್ವಜನಿಕವಾಗಿ ಖಂಡಿಸಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅನುರಾಗ್ ಕಶ್ಯಪ್, ‘ಪೊಲೀಸ್ ಸಮವಸ್ತ್ರ ಧರಿಸಲು ಆತ್ಮ ಮತ್ತು ಆತ್ಮಸಾಕ್ಷಿಯನ್ನು ಮಾರಿಕೊಳ್ಳಬೇಕು ಎಂಬುದು ನನಗೆ ತಿಳಿದಿರಲಿಲ್ಲ. ಇದು ತಪ್ಪು ಆದೇಶವಾಗಿರುವುದರಿಂದ ನಾನು ಇದನ್ನು ಪಾಲಿಸುವುದಿಲ್ಲ ಎಂದು ಎದ್ದು ನಿಂತು ಹೇಳಬಲ್ಲ ಒಬ್ಬನೇ ಒಬ್ಬ ಪೊಲೀಸ್ ಸಿಬ್ಬಂದಿ ಈ ದೇಶದಲ್ಲಿದ್ದಾರೆಯೇ?’ ಎಂದು ಪ್ರಶ್ನಿಸಿದ್ದಾರೆ.
ಸ್ಟ್ಯಾಂಡ್–ಅಪ್ ಕಮೇಡಿಯನ್, ನಟ ಹಾಗೂ ಚಲನಚಿತ್ರ ನಿರ್ಮಾಪಕ ವೀರ್ ದಾಸ್ ಕೂಡ ಪ್ರತಿಭಟನಾಕಾರರ ವಿರುದ್ಧದ ಕ್ರಮವನ್ನು ಟೀಕಿಸಿದ್ದು, ಈ ವಿಚಾರದಲ್ಲಿ ಚಿತ್ರರಂಗದ ಹಲವರ ಮೌನವನ್ನು ಪ್ರಶ್ನಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಅವರು, ‘ನೀವು ಭಾರತದ ಕಲಾವಿದರಾಗಿದ್ದು, ಯುವಜನರ ಪರವಾಗಿ ಧ್ವನಿ ಎತ್ತದೆ, ಬಳಿಕ ಅವರಿಗೆ ಟಿಕೆಟ್ ಗಳನ್ನು ಮಾರಾಟ ಮಾಡಲು ಯತ್ನಿಸುವುದು ಶುದ್ಧ ಡೋಂಗಿತನ’ ಎಂದು ಬರೆದಿದ್ದಾರೆ.
‘ಭಾರತೀಯ ಪ್ರೇಕ್ಷಕರು ಕಾಳಜಿ ವಹಿಸುವ ವಿಷಯಗಳಲ್ಲಿ ಮೌನ ಪ್ರೇಕ್ಷಕರಾಗಿದ್ದು, ಬಳಿಕ ಅದೇ ಪ್ರೇಕ್ಷಕರು ನಿಮಗಾಗಿ ಧ್ವನಿ ಎತ್ತಬೇಕು ಹಾಗೂ ನಿಮ್ಮ ಬಗ್ಗೆ ಕಾಳಜಿ ವಹಿಸಬೇಕು ಎಂದು ನಿರೀಕ್ಷಿಸುವುದು ಒಂದು ರೀತಿಯ ವಿಲಾಸಿತನ. ನಿಮ್ಮ ಕೆಲಸವನ್ನು ನೀವೇ ನೋಡಿಕೊಳ್ಳಿ. ಆದರೆ ನನ್ನ ವಿಷಯಕ್ಕೆ ಬಂದಾಗ ಮಾತ್ರ ಬೆಂಬಲಕ್ಕೆ ಬನ್ನಿ ಎಂಬುದು ನಡೆಯುವುದಿಲ್ಲ. ಭಾರತದ ಕಾನ್ಸರ್ಟ್ಗಳ ಆರ್ಥಿಕತೆ ಯುವಜನರು ಒಟ್ಟುಗೂಡುವುದರ ಮೇಲೆ ನಿರ್ಮಾಣವಾಗಿದೆ’ ಎಂದು ಹೇಳಿದ್ದಾರೆ.
‘ಇದು ಈಗ ಕೇವಲ ಯುವಜನರ ಭವಿಷ್ಯದ ಪ್ರಶ್ನೆಯಾಗಿದೆ. ಅವರು ಕಾಳಜಿ ವಹಿಸುವ ವಿಷಯಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಅವರನ್ನು ಬೆಂಬಲಿಸಬಹುದು’ ಎಂದು ವೀರ್ ದಾಸ್ ಹೇಳಿದ್ದಾರೆ.
ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಮತ್ತು ಅವರ ಪತ್ನಿ, ನಟಿ ಜೆನಿಲಿಯಾ ದೇಶ್ಮುಖ್ ಅವರು ಎಕ್ಸ್ನಲ್ಲಿ ಜಂಟಿ ಹೇಳಿಕೆ ಪ್ರಕಟಿಸಿದ್ದು, ‘ನಾವು ನಮ್ಮ ದೇಶದ ಯುವಜನರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಅವರ ಧ್ವನಿಗಳು ಸ್ಪಷ್ಟವಾಗಿ, ಗಟ್ಟಿಯಾಗಿ ಮತ್ತು ಯಾವುದೇ ಭಯವಿಲ್ಲದೆ ಕೇಳಿಸಬೇಕು. ಅವರು ನಮ್ಮ ಪ್ರಜಾಪ್ರಭುತ್ವದ ಹೃದಯಬಡಿತ ಹಾಗೂ ನಮ್ಮ ರಾಷ್ಟ್ರದ ಭವಿಷ್ಯದ ನಿಜವಾದ ಶಿಲ್ಪಿಗಳು. ಅವರ ಮಾತುಗಳನ್ನು ಕೇಳೋಣ, ಅವರನ್ನು ಬೆಂಬಲಿಸೋಣ ಮತ್ತು ಸಶಕ್ತಗೊಳಿಸೋಣ’ ಎಂದು ಹೇಳಿದ್ದಾರೆ.
ನಟಿ ಹುಮಾ ಖುರೇಷಿ ಕೂಡ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದು, ‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಇಷ್ಟೊಂದು ಬಲಪ್ರಯೋಗ ಮತ್ತು ಲಾಠಿ ಪ್ರಹಾರ ನಡೆದಿರುವುದನ್ನು ಕಂಡು ನನಗೆ ತೀವ್ರ ದುಃಖವಾಯಿತು. ಹೆಚ್ಚಿನ ತಾಳ್ಮೆ, ಮಾತುಕತೆ ಮತ್ತು ಆಲಿಸುವಿಕೆಯ ಮೂಲಕ ಈ ಪರಿಸ್ಥಿತಿಯನ್ನು ನಿಭಾಯಿಸಬಹುದಿತ್ತು. ಭಾರತದ ಪ್ರಜೆಗಳಾದ ನಾವು ಈ ಸರ್ಕಾರವನ್ನು ಆಯ್ಕೆ ಮಾಡಿದ್ದೇವೆ. ಇಂದು ನಾವೆಲ್ಲರೂ ಪ್ರಶ್ನೆಗಳನ್ನು ಕೇಳಬೇಕು ಹಾಗೂ ಹೊಣೆಗಾರಿಕೆಯನ್ನು ನಿರೀಕ್ಷಿಸಬೇಕು’ ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರ ವಿರುದ್ಧ ದಿಲ್ಲಿ ಪೊಲೀಸರು ಕೈಗೊಂಡ ಕ್ರಮವನ್ನು ಟೀಕಿಸಿರುವ ಅವರು, ಶಾಂತಿಯುತ ಪ್ರತಿಭಟನೆಗಳ ಸಂದರ್ಭದಲ್ಲಿ ಸಂಯಮ, ಸಂವಾದ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.






