ಎಸ್.ಐ.ಆರ್ ಕುರಿತು ಸಾರ್ವಜನಿಕರ ಆತಂಕ ನಿವಾರಿಸಲು ಕ್ರಮಕೈಗೊಳ್ಳುವಂತೆ ಎಪಿ ಉಸ್ತಾದ್ ಒತ್ತಾಯ

ಹೊಸದಿಲ್ಲಿ: ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಭಯ ಮತ್ತು ಆತಂಕವನ್ನು ನಿವಾರಿಸಲು ತಕ್ಷಣದ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳು ವಂತೆ ಭಾರತದ ಗ್ರಾಂಡ್ ಮುಫ್ತಿ ಶೇಖ್ ಅಬೂಬಕರ್ ಅಹ್ಮದ್ (ಎಪಿ ಉಸ್ತಾದ್) ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಗ್ರಾಂಡ್ ಮುಫ್ತಿಯವರು, ಈಗಾಗಲೇ SIR ಪ್ರಕ್ರಿಯೆ ಪೂರ್ಣಗೊಂಡಿರುವ ಬಿಹಾರದಲ್ಲಿ ಲಕ್ಷಾಂತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಈ ವರದಿ ಭಾರತದ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ಕಾರಣವಾಯಿತು ಎಂದು ಹೇಳಿಕೆ ನೀಡಿ ಗಮನ ಸೆಳೆದರು. "ಹೊರಗುಳಿದವರಲ್ಲಿ ಹೆಚ್ಚಿನ ಸಂಖ್ಯೆಯವರು ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದಾರೆ," ಎಂದು ಹೇಳಿದ ಅವರು ಸರಿಪಡಿಸುವ ಕ್ರಮಗಳನ್ನು ತೆಗೆದು ಕೊಳ್ಳದಿದ್ದರೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ ರೀತಿಯ ಪರಿಣಾಮಗಳು ಉಂಟಾಗಬಹುದು ಎಂದು ಸೂಚಿಸಿದರು. S I R ನೆಪದಲ್ಲಿ, ಒಂದು ರಹಸ್ಯ ಪೌರತ್ವ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿರಬಹುದು ಎಂಬ ವ್ಯಾಪಕ ಆತಂಕವಿದೆ," ಎಂದು ಎಪಿ ಉಸ್ತಾದ್ ಎಚ್ಚರಿಸಿದರು.
ನಿಖರವಾದ ಮತದಾರರ ಪಟ್ಟಿಯನ್ನು ನಿರ್ವಹಿಸುವ ಗುರಿಯನ್ನು ಹೊಂದಿರುವ ಕಾನೂನುಬದ್ಧ ಪರಿಶೀಲನಾ ಪ್ರಯತ್ನಗಳನ್ನು ಯಾರೂ ವಿರೋಧಿಸುವುದಿಲ್ಲ ಎಂದು ಒತ್ತಿ ಹೇಳಿದ ಗ್ರಾಂಡ್ ಮುಫ್ತಿಯವರು, ಈ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕತೆ ಮತ್ತು ನ್ಯಾಯಸಮ್ಮತವಾಗಿ ನಡೆಸಬೇಕು ಎಂದು ಹೇಳಿದರು.
SIR ಗಾಗಿ ವಿಧಿಸಲಾಗುತ್ತಿರುವ ದಾಖಲೆಗಳ ಅವಶ್ಯಕತೆಗಳು ಹಿಂದುಳಿದ ವರ್ಗಗಳು ಮತ್ತು ವಲಸಿಗರಿಗೆ ತೀವ್ರ ತೊಂದರೆಗಳನ್ನು ಉಂಟುಮಾಡುತ್ತಿವೆ. ಈ ಕಾರ್ಯವಿಧಾನದ ಅಡೆತಡೆಗಳು ತಮ್ಮ ಮತದಾನದ ಹಕ್ಕುಗಳನ್ನು ಮಾತ್ರವಲ್ಲದೆ ಪೌರತ್ವವನ್ನೂ ಅಪಾಯಕ್ಕೆ ತಳ್ಳಬಹುದು ಎಂದು ಹಲವರು ಭಯಪಡುತ್ತಾರೆ," ಎಂದು ಅವರು ಅಭಿಪ್ರಾಯಪಟ್ಟರು.
ತಮ್ಮ ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ನಾಗರಿಕರು ಪೂರ್ವಭಾವಿ ಕ್ರಮಗಳನ್ನು ತೆಗೆದು ಕೊಳ್ಳಬೇಕೆಂದು ಅವರು ಒತ್ತಾಯಿಸಿದರು. "ಅಜ್ಞಾನ ಅಥವಾ ನಿರ್ಲಕ್ಷ್ಯದಿಂದಾಗಿ ಯಾರೂ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಜನರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಸಂರಕ್ಷಿಸಬೇಕು," ಎಂದು ಅವರು ಹೇಳಿದರು.
ಪರಿಶೀಲನಾ ಪ್ರಕ್ರಿಯೆಯುದ್ದಕ್ಕೂ ಜಾಗೃತಿ ಮೂಡಿಸಲು ಮತ್ತು ಸಾರ್ವಜನಿಕರಿಗೆ ಸಹಾಯ ಮಾಡಲು ಮುಂದೆ ಬರುವಂತೆ ಗ್ರಾಂಡ್ ಮುಫ್ತಿಯವರು ರಾಜಕೀಯ ಪಕ್ಷಗಳು, ಸರ್ಕಾರಿ ಅಧಿಕಾರಿಗಳು, ಸಾಮಾಜಿಕ ಸಂಘಟನೆಗಳು ಮತ್ತು ಮಾಧ್ಯಮಗಳಿಗೆ ಮನವಿ ಮಾಡಿದರು.







