ಕೇಂದ್ರ ಸರ್ಕಾರದ 'ಸಂಚಾರ್ ಸಾಥಿ' ಆ್ಯಪ್ ಕಡ್ಡಾಯ ಆದೇಶಕ್ಕೆ ಆ್ಯಪಲ್ ವಿರೋಧ; ಗೌಪ್ಯತೆಗೆ ಅಪಾಯ ಉಲ್ಲೇಖಿಸಿ ತೀವ್ರ ಕಳವಳ ವ್ಯಕ್ತಪಡಿಸಿದ ಟೆಕ್ ದೈತ್ಯ

Photo Credit : sancharsaathi.gov.in
ಹೊಸದಿಲ್ಲಿ: ಸರ್ಕಾರಿ ಸೈಬರ್ ಸುರಕ್ಷತಾ ಅಪ್ಲಿಕೇಶನ್ ‘ಸಂಚಾರ್ ಸಾಥಿ’ ಯನ್ನು ಸ್ಮಾರ್ಟ್ಫೋನ್ಗಳಲ್ಲಿ ಕಡ್ಡಾಯವಾಗಿ ಪ್ರಿ-ಇನ್ಸ್ಟಾಲ್ ಮಾಡಲು ನೀಡಿದ ಕೇಂದ್ರದ ಆದೇಶಕ್ಕೆ ಜಾಗತಿಕ ತಂತ್ರಜ್ಞಾನ ದೈತ್ಯ ಆ್ಯಪಲ್ ವಿರೋಧ ವ್ಯಕ್ತಪಡಿಸಿದೆ.
ಗೌಪ್ಯತೆ ಹಾಗೂ iOS ವ್ಯವಸ್ಥೆಯ ಭದ್ರತಾ ತತ್ವಗಳಿಗೆ ಧಕ್ಕೆ ಉಂಟಾಗುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಅನುಸರಿಸಲು ಸಾಧ್ಯವಿಲ್ಲ ಎಂಬ ತನ್ನ ನಿಲುವನ್ನು ಕಂಪೆನಿ ಕೇಂದ್ರ ಸರ್ಕಾರಕ್ಕೆ ತಿಳಿಸಲು ಸಿದ್ದವಾಗಿದೆ ಎಂದು ಮೂಲಗಳು ಹೇಳಿವೆ.
ಕಳೆದ ವಾರ ಜಾರಿಯಾದ ಗೌಪ್ಯ ನಿರ್ದೇಶನದಲ್ಲಿ, ಆ್ಯಪಲ್, ಸ್ಯಾಮ್ಸಂಗ್, ಶಿಯೋಮಿ ಸೇರಿದಂತೆ ಎಲ್ಲ ಪ್ರಮುಖ ತಯಾರಕರು 90 ದಿನಗಳೊಳಗೆ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ತಮ್ಮ ಹೊಸ ಫೋನ್ ಗಳಲ್ಲಿ ಪ್ರಿ-ಇನ್ಸ್ಟಾಲ್ ಮಾಡಬೇಕು ಮತ್ತು ಈಗಾಗಲೇ ಮಾರಾಟದಲ್ಲಿರುವ ಸಾಧನಗಳಿಗೆ ಸಾಫ್ಟ್ವೇರ್ ಅಪ್ಡೇಟ್ ಮೂಲಕ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿತ್ತು.
ಕಳ್ಳತನವಾದ ಫೋನ್ಗಳನ್ನು ಪತ್ತೆಹಚ್ಚುವುದು, ಅವುಗಳನ್ನು ಬ್ಲಾಕ್ ಮಾಡುವುದು ಮತ್ತು ದುರುಪಯೋಗ ತಡೆಯುವುದು ಈ ಅಪ್ಲಿಕೇಶನ್ನ ಉದ್ದೇಶವೆಂದು ಸರ್ಕಾರ ಹೇಳಿದೆ.
ಆದರೆ ಅಪ್ಲಿಕೇಶನ್ನ್ನು ನಿಷ್ಕ್ರಿಯಗೊಳಿಸಲು ಅವಕಾಶ ಇರಬಾರದು ಎಂಬ ಕೇಂದ್ರದ ಸೂಚನೆ ಗೌಪ್ಯತೆ ಉಲ್ಲಂಘನೆಯ ಭೀತಿ ಮತ್ತು ರಾಜಕೀಯ ಟೀಕೆಗೆ ಕಾರಣವಾಗಿದೆ.
ಮೂಲಗಳ ಪ್ರಕಾರ, iOS ವ್ಯವಸ್ಥೆಗೆ ಹೊರಗಿನ ಸರ್ಕಾರಿ ಅಪ್ಲಿಕೇಶನ್ ಅನ್ನು ಬಲವಂತವಾಗಿ ಸೇರಿಸುವುದು ಆ್ಯಪಲ್ ನ ಮೂಲ ಗೌಪ್ಯತಾ ನೀತಿಗೆ ವಿರೋಧವಾಗಿದೆ. ಜಗತ್ತಿನ ಯಾವುದೇ ದೇಶದಲ್ಲೂ ಇಂತಹ ಕಡ್ಡಾಯ ಪ್ರಿ-ಇನ್ಸ್ಟಾಲ್ ಅನ್ನು ಆ್ಯಪಲ್ ಅನುಸರಿಸುವುದಿಲ್ಲ ಎನ್ನುವುದು ಕಂಪೆನಿಯ ನಿಲುವು. “ಈ ಆದೇಶವು ಕೇವಲ ಒತ್ತಡವಲ್ಲ, ಡಬಲ್ ಬ್ಯಾರೆಲ್ ಒತ್ತಾಯದಂತಿದೆ” ಎಂದು ಒಂದು ಉದ್ಯಮ ಮೂಲ ಹೇಳಿದೆ ಎಂದು ವರದಿಯಾಗಿದೆ.
ಆ್ಯಪಲ್ ಹಾಗೂ ದೂರಸಂಪರ್ಕ ಸಚಿವಾಲಯ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೂ ನಡುವೆ, ಟೀಕೆಗಳು ಹೆಚ್ಚುತ್ತಿದ್ದಂತೆ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, “ಸಂಚಾರ್ ಸಾಥಿ ಸ್ವಯಂಪ್ರೇರಿತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ. ಬಳಕೆದಾರರು ಯಾವಾಗ ಬೇಕಾದರೂ ಅಪ್ಲಿಕೇಶನ್ ಅಳಿಸಬಹುದು” ಎಂದು ಹೇಳಿದ್ದಾರೆ. ಆದರೆ ನವೆಂಬರ್ 28ರ ನಿರ್ದೇಶನದಂತೆ ಅಪ್ಲಿಕೇಶನ್ನ್ನು ನಿಷ್ಕ್ರಿಯಗೊಳಿಸಬಾರದು ಎನ್ನುವ ಷರತ್ತಿನ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಲಿಲ್ಲ.
ಸಂಸತ್ತಿನಲ್ಲಿಯೂ ವಿವಾದ ತೀವ್ರಗೊಂಡಿದ್ದು, ವಿರೋಧ ಪಕ್ಷಗಳು ಈ ಕ್ರಮವನ್ನು ಗೂಢಚಾರಿಕೆ ಯತ್ನವೆಂದು ಟೀಕಿಸಿವೆ. ಕಾಂಗ್ರೆಸ್ ಆದೇಶ ಹಿಂತೆಗೆದುಕೊಳ್ಳಲು ಆಗ್ರಹಿಸಿದ್ದು, ಕೆ.ಸಿ. ವೇಣುಗೋಪಾಲ್ X ನಲ್ಲಿ “Big Brother ನಮ್ಮನ್ನು ನೋಡಲು ಸಾಧ್ಯವಿಲ್ಲ” ಎಂದು ಪೋಸ್ಟ್ ಬರೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯೂ ಈ ವಿಷಯವನ್ನು ಸಂಸತ್ತಿನಲ್ಲಿ ಎತ್ತಲು ಸಿದ್ಧರಾಗಿದ್ದಾರೆ.
ಸ್ಯಾಮ್ಸಂಗ್ ಸೇರಿ ಇತರ ಆಂಡ್ರಾಯ್ಡ್ ಕಂಪೆನಿಗಳು ಆದೇಶವನ್ನು ಪರಿಶೀಲಿಸುತ್ತಿದ್ದು, ತಾಂತ್ರಿಕ ಹಾಗೂ ಭದ್ರತಾ ಅಂಶಗಳ ಬಗ್ಗೆ ಸ್ಪಷ್ಟತೆ ಹುಡುಕುತ್ತಿದ್ದಾರೆ. ಆಂಡ್ರಾಯ್ಡ್ ವ್ಯವಸ್ಥೆ ಕಸ್ಟಮೈಸೇಶನ್ ಗೆ ಅವಕಾಶ ನೀಡಿದರೂ, ಬಳಕೆದಾರರ ಗೌಪ್ಯತೆ ರಕ್ಷಣೆ ಪ್ರಶ್ನೆ ಅವರ ಮುಂದೂ ದೊಡ್ಡದಾಗಿದೆ.
ಸೈಬರ್ ಅಪರಾಧ, ನಕಲಿ IMEI ಬಳಕೆ ಹಾಗೂ ಕದ್ದ ಫೋನ್ಗಳ ಮರುಮಾರಾಟ ನಿಯಂತ್ರಣಕ್ಕಾಗಿ ಕ್ರಮ ಅಗತ್ಯ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದ್ದರೂ, ತಂತ್ರಜ್ಞಾನ ವಲಯ ಮತ್ತು ನಾಗರಿಕ ಹಕ್ಕು ಸಂಘಟನೆಗಳು ವೈಯಕ್ತಿಕ ಗೌಪ್ಯತೆ ಕುಂಠಿತವಾಗುವ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿವೆ.







