ಸಿಬಿಎಸ್ಇ ಸಂಯೋಜಿತ ಶಾಲೆಗಳಲ್ಲಿ ಮಾನಸಿಕ ಸ್ವಾಸ್ಥ್ಯ, ವೃತ್ತಿಜೀವನ ಸಲಹೆಗಾರರ ನೇಮಕಾತಿ ಕಡ್ಡಾಯ

PC : indianexpress
ಹೊಸದಿಲ್ಲಿ,ಜ.24: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಬಲಪಡಿಸುವ ಮತ್ತು ಅವರಿಗೆ ವೃತ್ತಿಜೀವನ ಮಾರ್ಗದರ್ಶನವನ್ನು ನೀಡುವ ನಿಟ್ಟಿನಲ್ಲಿ ಮಹತ್ವದ ನೀತಿ ಸುಧಾರಣೆಯನ್ನು ತಂದಿದೆ. ಎಲ್ಲ ಸಂಯೋಜಿತ ಶಾಲೆಗಳಲ್ಲಿ ಸಾಮಾಜಿಕ-ಭಾವನಾತ್ಮಕ ಮತ್ತು ವೃತ್ತಿಜೀವನ ಸಲಹೆಗಾರರ ನೇಮಕಾತಿಯನ್ನು ಅದು ಕಡ್ಡಾಯಗೊಳಿಸಿದೆ.
ಇದಕ್ಕಾಗಿ ಮಂಡಳಿಯು ಸಿಬಿಎಸ್ಇ ಸಂಯೋಜನೆ ಉಪನಿಯಮಗಳ 2.4.12 ನಿಬಂಧನೆಯನ್ನು ತಿದ್ದುಪಡಿಗೊಳಿಸಿದೆ.
ಕೋಟಾ ಮೂಲದ ವಕೀಲ ಸುಜೀತ್ ಸ್ವಾಮಿ ಮತ್ತು ಕೆಲವು ಮನೋವಿಜ್ಞಾನ ತಜ್ಞರು ಜುಲೈ 2025ರಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದ್ದರು.
ಶೈಕ್ಷಣಿಕ ಒತ್ತಡ ಮತ್ತು ರಚನಾತ್ಮಕ ವೃತ್ತಿ ಮಾರ್ಗದರ್ಶನದ ಕೊರತೆ ಸೇರಿದಂತೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದ ಪಿಐಎಲ್, ಶಾಲೆಗಳಲ್ಲಿ ಅರ್ಹ ಸಲಹೆಗಾರರ ಕಡ್ಡಾಯ ನೇಮಕಾತಿ ಮತ್ತು ಏಕರೂಪ ಮಾನಸಿಕ ಆರೋಗ್ಯ ಬೆಂಬಲ ವ್ಯವಸ್ಥೆಗಾಗಿ ಕೋರಿತ್ತು.
2025ರ ಸೆಪ್ಟಂಬರ್ನಲ್ಲಿ ನಡೆದಿದ್ದ ವಿಚಾರಣೆ ಸಂದರ್ಭದಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಪೀಠವು ಸಿಬಿಎಸ್ಇ, ರಾಜಸ್ಥಾನ ಪ್ರೌಢ ಶಿಕ್ಷಣ ಮಂಡಳಿ, ವಿಶ್ವವಿದ್ಯಾಲಯ ಧನಸಹಾಯ ಆಯೋಗ ಮತ್ತು ರಾಜ್ಯ ಸರಕಾರದಿಂದ ಉತ್ತರಗಳು ಮತ್ತು ಸಲಹೆಗಳನ್ನು ಕೋರಿತ್ತು. ನ್ಯಾಯಾಲಯಕ್ಕೆ ಸಲ್ಲಿಕೆಗಳನ್ನು ಪರಿಗಣಿಸಿದ ಬಳಿಕ ಸಿಬಿಎಸ್ಇ 2026ರ ಜ.19ರಂದು ಸುತ್ತೋಲೆಯ ಮೂಲಕ ಪ್ರಮುಖ ತಿದ್ದುಪಡಿಗಳನ್ನು ತಂದಿದೆ.







