ಅರವಿಂದ್ ಕೇಜ್ರಿವಾಲ್, ಪುತ್ರಿಗೆ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಕರೆ; 7 ಕೋಟಿ ರೂ. ಹಣಕ್ಕೆ ಬೇಡಿಕೆ

ಅರವಿಂದ್ ಕೇಜ್ರಿವಾಲ್ , ಲಾರೆನ್ಸ್ ಬಿಷ್ಣೋಯ್ | Photo Credit : PTI
ಹೊಸದಿಲ್ಲಿ: ದಿಲ್ಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಮಗಳು ಹರ್ಷಿತಾ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಹೆಸರಿನಲ್ಲಿ ಬೆದರಿಕೆ ಹಾಕಿರುವ ವ್ಯಕ್ತಿಯೊಬ್ಬ 7 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದಿದ್ದರೆ ತಂದೆ-ಮಗಳನ್ನು ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತಿಲಕ್ ನಗರದ ಶಾಸಕ ಜರ್ನೈಲ್ ಸಿಂಗ್ ಅವರು ಈ ಬೆದರಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ವಿದೇಶಗಳೊಂದಿಗೆ ಸಂಪರ್ಕ ಹೊಂದಿರುವ ಗ್ಯಾಂಗ್ ನ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ತಮಗೆ ಫೋನ್ ಕರೆ ಮಾಡಿದ್ದಾನೆ. ವಾಟ್ಸ್ಆ್ಯಪ್ ಮೂಲಕವೂ ಬೆದರಿಕೆ ಸಂದೇಶ ಕಳುಹಿಸಿದ್ದಾನೆ ಎಂದು ಅವರು ದಿಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.
ನ. 6ರಂದು ಪಂಜಾಬ್ ನ ಮೊಹಾಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ಕರೆ ಮಾಡಿದ ವ್ಯಕ್ತಿ 7 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ ಎಂದು ಜರ್ನೈಲ್ ಸಿಂಗ್ ಹೇಳಿದ್ದಾರೆ. ಹಣ ನೀಡದಿದ್ದರೆ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಮಗಳು ಹರ್ಷಿತಾ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಮೊಬೈಲ್ ಕರೆಗಳ ಜಾಡು ಹಿಡಿದ ಪೊಲೀಸರು
ಜರ್ನೈಲ್ ಸಿಂಗ್ ಅವರ ದೂರಿನ ಆಧಾರದಲ್ಲಿ ಮೊಹಾಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೈಬರ್ ಅಪರಾಧ ವಿಭಾಗದ ಅಧಿಕಾರಿ ಸುನಿಲ್ ಕುಮಾರ್ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ.
ಬೆದರಿಕೆ ಕರೆ ಮಾಡಲು ಬಳಸಿದ ಮೊಬೈಲ್ ಸಂಖ್ಯೆಯ ಕರೆ ದಾಖಲೆಗಳು, ಇಂಟರ್ನೆಟ್ ಪ್ರೋಟೋಕಾಲ್ (IP) ಲಾಗ್ಗಳು ಹಾಗೂ ಆ ಸಂಖ್ಯೆಯ ಸ್ಥಳದ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕೇಜ್ರಿವಾಲ್ ಮತ್ತು ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆಯೂ ಜರ್ನೈಲ್ ಸಿಂಗ್ ಮನವಿ ಮಾಡಿದ್ದಾರೆ.
ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷವೇ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದಲ್ಲಿ ಸರಕಾರ ಆಡಳಿತ ನಡೆಸುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಸುಲಿಗೆ, ಗುಂಡಿನ ದಾಳಿ ಮತ್ತು ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ನಡೆಸುವ ಹತ್ಯೆಗಳ ಪ್ರಕರಣಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಹೆಸರು ಪದೇ ಪದೇ ಕೇಳಿಬರುತ್ತಿದೆ. ದೇಶದ ಗಮನ ಸೆಳೆದಿರುವ ಸಂಘಟಿತ ಅಪರಾಧ ಜಾಲಗಳಲ್ಲಿ ಒಂದಾಗಿರುವ ಈ ಗ್ಯಾಂಗ್, ಕೇಜ್ರಿವಾಲ್ ಅವರಿಗೆ ಬಂದಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಮತ್ತೆ ಸುದ್ದಿಯಲ್ಲಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿದ್ದೇ ತನ್ನ ಗ್ಯಾಂಗ್ ನ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದನು. ಮತ್ತೊಬ್ಬ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಮತ್ತು ವಿದೇಶದಲ್ಲಿರುವ ಇತರ ಅಪರಾಧಿಗಳೊಂದಿಗೆ ಸೇರಿ ಈ ಜಾಲವನ್ನು ನಡೆಸುತ್ತಿದ್ದನು. ಇದಕ್ಕಾಗಿ ವಿವಿಧ ರಾಜ್ಯಗಳ ಸ್ಥಳೀಯ ಶೂಟರ್ ಗಳು ಮತ್ತು ಸುರಕ್ಷಿತ ತಾಣಗಳನ್ನು ಬಳಸಿಕೊಳ್ಳಲಾಗುತ್ತಿತ್ತು.






