‘ನನಗೆ ತಿಳಿದಿರುವಂತೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರ’: ಸಿಜೆಪಿ ಪ್ರತಿಭಟನೆ ವಿರುದ್ಧದ ಪೊಲೀಸ್ ಕ್ರಮಕ್ಕೆ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ

Photo Credit : PTI
ಹೊಸದಿಲ್ಲಿ: ಶಾಂತಿಯುತ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಭಾಗವಾಗಿವೆ. ನನಗೆ ತಿಳಿದಿರುವಂತೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಶನಿವಾರ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ‘ಜಂತರ್ ಮಂತರ್ 2.0’ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಕೈಗೊಂಡ ಕ್ರಮದ ಕುರಿತು ಅವರು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಶಾಂತಿಯುತ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಚಟುವಟಿಕೆಗಳಾಗಿವೆ. ನನಗೆ ತಿಳಿದಿರುವಂತೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರ’ ಎಂದು ಮಂಜ್ರೇಕರ್ ಪೋಸ್ಟ್ ಮಾಡಿದ್ದಾರೆ.
Peaceful protests is a democratic activity. Last time I heard India was a democratic country.
— Sanjay Manjrekar (@sanjaymanjrekar) October 10, 2026
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳನ್ನು ಮುಂದಿಟ್ಟುಕೊಂಡು ಹಾಗೂ ಈ ಕುರಿತು ಹೊಣೆಗಾರಿಕೆ ನಿಗದಿಪಡಿಸುವಂತೆ ಒತ್ತಾಯಿಸಿ ಸಿಜೆಪಿ ಪ್ರತಿಭಟನೆ ಆಯೋಜಿಸಿತ್ತು. ಸಾರ್ವಜನಿಕ ಸುರಕ್ಷತೆ, ಸಂಚಾರ ನಿರ್ವಹಣೆ ಮತ್ತು ಕಾನೂನು-ಸುವ್ಯವಸ್ಥೆಯ ಕಾರಣಗಳನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜಧಾನಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಪೊಲೀಸರು ಸಿಬ್ಬಂದಿಯನ್ನು ನಿಯೋಜಿಸಿ, ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದರು. ಪ್ರವೇಶ ದ್ವಾರಗಳಲ್ಲಿ ತಪಾಸಣೆಯನ್ನೂ ತೀವ್ರಗೊಳಿಸಿದ್ದರು.






