Asaam | ವಿಶೇಷ ಪರಿಷ್ಕರಣೆಯಡಿ 10 ಲಕ್ಷಕ್ಕೂ ಅಧಿಕ ಮತದಾರರನ್ನು ಅಳಿಸಲು EC ಸಜ್ಜು!

ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ,ಡಿ.17: ಅಸ್ಸಾಮಿನಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯಡಿ ಮನೆಮನೆ ಪರಿಶೀಲನೆ ಪ್ರಕ್ರಿಯೆಯ ಬಳಿಕ 10 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಅಳಿಸಲು ಗುರುತಿಸಲಾಗಿದೆ ಎಂದು ಚುನಾವಣಾ ಆಯೋಗವು ಶನಿವಾರ ತಿಳಿಸಿದೆ.
ಈ ಪೈಕಿ ಸುಮಾರು 4.7 ಲಕ್ಷ ಮತದಾರರು ಮೃತಪಟ್ಟಿದ್ದು,5.23 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ನೋಂದಾಯಿತ ವಿಳಾಸಗಳಿಂದ ಸ್ಥಳಾಂತರಗೊಂಡಿದ್ದಾರೆ.
ಚುನಾವಣಾ ಆಯೋಗವು ಪ್ರಸ್ತುತ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್ಐಆರ್) ಅಸ್ಸಾಮಿನಲ್ಲಿ ಕೈಗೊಂಡಿಲ್ಲ. ಬದಲಿಗೆ ಜ.1,2026ರನ್ನು ಅರ್ಹತಾ ದಿನವನ್ನಾಗಿ ಇಟ್ಟುಕೊಂಡು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯನ್ನು ನಡೆಸುವಂತೆ ಅದು ನ.17ರಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿತ್ತು.
ಅ.27ರಂದು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಪ್ರಕಟಿಸಿದ್ದ ಸಂದರ್ಭ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು, ಪೌರತ್ವ ಕಾಯ್ದೆಯು ಅಸ್ಸಾಮಿಗಾಗಿ ಪ್ರತ್ಯೇಕ ನಿಬಂಧನೆಗಳನ್ನು ಹೊಂದಿರುವುದರಿಂದ ಆ ರಾಜ್ಯಕ್ಕಾಗಿ ಇನ್ನೊಂದು ಆದೇಶವನ್ನು ನಂತರ ಹೊರಡಿಸಲಾಗುವುದು ಎಂದು ತಿಳಿಸಿದ್ದರು.
ಅಸ್ಸಾಮಿನಲ್ಲಿ ವಿಧಾನಸಭಾ ಚುನಾವಣೆಗಳು ಮುಂದಿನ ವರ್ಷದ ಮಾರ್ಚ್-ಎಪ್ರಿಲ್ನಲ್ಲಿ ನಡೆಯುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಮನೆಮನೆ ಪರಿಶೀಲನೆ ಕಾರ್ಯ ನ.22 ಮತ್ತು ಡಿ.20ರ ನಡುವೆ ನಡೆದಿದ್ದು,ಇದು SIR ನಂತೆ ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿರಲಿಲ್ಲ. ಅಸ್ಸಾಮಿನಲ್ಲಿ 2,52,02,775 ಮತದಾರಿದ್ದಾರೆ. ಈ ಪೈಕಿ ವಿಶೇಷ ‘ಡಿ’ಮತದಾರರು ಅಥವಾ ವಿದೇಶಿಯರ ನ್ಯಾಯಮಂಡಳಿಗಳಲ್ಲಿ ತಮ್ಮ ಪ್ರಕರಣಗಳು ಬಾಕಿಯಿರುವ ಮತದಾರರ ಸಂಖ್ಯೆ 93,021 ಆಗಿದ್ದು,ಅವರ ಪೌರತ್ವವನ್ನು ನ್ಯಾಯಾಲಯವು ಎತ್ತಿ ಹಿಡಿಯುವವರೆಗೆ ಅವರಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಚುನಾವಣಾ ಆಯೋಗವು ಶನಿವಾರ ತಿಳಿಸಿತು.
ಇದಲ್ಲದೆ 53,619 ನಕಲು ನಮೂದುಗಳನ್ನು ಪತ್ತೆ ಹಚ್ಚಲಾಗಿದೆ. ಮತದಾರರ ಪರಿಶೀಲನೆಗಾಗಿ ಬೂತ್ ಮಟ್ಟದ ಅಧಿಕಾರಿಗಳು 61,03,103 ಮನೆಗಳಿಗೆ ಭೇಟಿ ನೀಡಿದ್ದಾರೆ ಎಂದೂ ಅದು ಹೇಳಿದೆ.
ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸಿದ ಬಳಿಕ ಹಕ್ಕುಕೋರಿಕೆ ಮತ್ತು ಆಕ್ಷೇಪಗಳ ಸಲ್ಲಿಕೆ ಅವಧಿಯು ಆರಂಭವಾಗಲಿದ್ದು,ಜ.22ರವರೆಗೆ ಮುಂದುವರಿಯಲಿದೆ. ಅಂತಿಮ ಮತದಾರರ ಪಟ್ಟಿಗಳು ಫೆ.10ರಂದು ಪ್ರಕಟಗೊಳ್ಳಲಿವೆ. ಈ ನಡುವೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಅಡಿ ಈವರೆಗೆ ಸುಮಾರು 3.6 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಗಳಿಂದ ಅಳಿಸಲಾಗಿದ್ದು,ಅಂತಿಮ ಮತದಾರರ ಪಟ್ಟಿಗಳು ಫೆ.14ರಂದು ಪ್ರಕಟಗೊಳ್ಳಲಿವೆ.
ಉತ್ತರ ಪ್ರದೇಶದಲ್ಲಿ ಕರಡು ಮತದಾರರ ಪಟ್ಟಿಗಳನ್ನು ಡಿ.31ರಂದು ಪ್ರಕಟಿಸಲಾಗುವುದು.







