“ಕಾಮಗಾರಿ ವಿಳಂಬದಿಂದ ತಲೆ ತಗ್ಗಿಸುವಂತಾಗಿದೆ”; ಮುಂಬೈ-ಗೋವಾ ಹೆದ್ದಾರಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಕೇಂದ್ರ ಸಚಿವ ನಿತಿನ್ ಗಡ್ಕರಿ (Photo: PTI)
ಮುಂಬೈ: ಮುಂಬೈ-ಗೋವಾ ಹೆದ್ದಾರಿಯ ವಿಸ್ತರಣೆಯ ಕಾಮಗಾರಿಯಲ್ಲಿ ದೀರ್ಘಕಾಲ ಆದ ವಿಳಂಬದಿಂದ ತಲೆ ತಗ್ಗಿಸುವಂತಾಗಿದೆ ಎಂದು ಕೇಂದ್ರ ಸಚಿವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಯೋಜನೆ ಅಂತಿಮವಾಗಿ ಮುಕ್ತಾಯಗೊಂಡಿದ್ದು, ಅದರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಬುಧವಾರ ಪಣಜಿಯ ಬಳಿಯ ಪೊರ್ವೊರಿಂ ಬಳಿ ಆರು ಪಥದ ಎತ್ತರಿಸಿದ ರಸ್ತೆ ಕಾರಿಡಾರ್ ಅನ್ನು ಉದ್ಘಾಟಿಸಿ ಮಾತನಾಡಿದ ನಿತಿನ್ ಗಡ್ಕರಿ, ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗಿದ್ದರಿಂದ, ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಈ ಮುನ್ನ ನಿರ್ಧರಿಸಿದ್ದೆ ಎಂದು ಹೇಳಿದರು.
“ಮುಂಬೈ-ಗೋವಾ ಹೆದ್ದಾರಿ ವಿಸ್ತರಣೆ ಕಾಮಗಾರಿಯು ಇಷ್ಟು ವಿಳಂಬವಾಗಿದ್ದರಿಂದ, ತಲೆ ತಗ್ಗಿಸುವಂತಾಗಿತ್ತು. ಹೀಗಾಗಿ, ಈ ಮುನ್ನ ಅದರ ಉದ್ಘಾಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದೆ” ಎಂದು ಅವರು ತಿಳಿಸಿದರು.
ಈ ವಿಷಯದ ಕುರಿತು ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ನಾನೇ ಖುದ್ದಾಗಿ ಹೆದ್ದಾರಿಯ ತಪಾಸಣೆ ಕೈಗೊಳ್ಳಲಿದ್ದೇನೆ ಎಂದೂ ಅವರು ಹೇಳಿದರು.
“ಅಕ್ಟೋಬರ್ ತಿಂಗಳಲ್ಲಿ ನಾನು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು, ಹೆದ್ದಾರಿಯನ್ನು ಖುದ್ದಾಗಿ ತಪಾಸಣೆ ಮಾಡಲು ಹಾಗೂ ಈ ರಸ್ತೆಯಲ್ಲಿನ ಪ್ರಯಾಣ ಪ್ರಯಾಣಿಕರಿಗೆ ಆರಾಮದಾಯಕವಾಗಿರುವುದೇ ಎಂಬುದನ್ನು ಮೌಲ್ಯಮಾಪನ ಮಾಡಲು ಗೋವಾವರೆಗೆ ರಸ್ತೆಯಲ್ಲೇ ಪ್ರಯಾಣ ಬೆಳೆಸಲಿದ್ದೇನೆ” ಎಂದು ಅವರು ಪ್ರಕಟಿಸಿದರು.
ಇದೇ ವೇಳೆ, ವಿಳಂಬ ಹಾಗೂ ಮೂಲಸೌಕರ್ಯಗಳ ಕಳಪೆ ನಿರ್ಮಾಣಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ನಾನು ಬಯಸಿದ್ದೇನೆ ಎಂದೂ ಅವರು ಹೇಳಿದರು.






