ಏಶ್ಯ ಪವರ್ ಇಂಡೆಕ್ಸ್ | ಪ್ರಮುಖ ಶಕ್ತಿಯ ಸ್ಥಾನಕ್ಕೇರಿದ ಭಾರತ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ನ.28: 2025ರ ಸಾಲಿನ ಏಶ್ಯ ಶಕ್ತಿ ಸೂಚ್ಯಂಕದಲ್ಲಿ ಭಾರತವು ಪ್ರಮುಖ ಶಕ್ತಿಯ ಸ್ಥಾನಮಾನವನ್ನು ಪಡೆದುಕೊಂಡಿದೆ. ಸೂಚ್ಯಂಕದಲ್ಲಿ ಅಮೆರಿಕ ಹಾಗೂ ಚೀನಾ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ. ಭಾರತವು 40 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ ಆರ್ಥಿಕ ಬೆಳವಣಿಗೆ ಹಾಗೂ ಮಿಲಿಟರಿ ಸಾಮರ್ಥ್ಯದ ಆಧಾರದಲ್ಲಿ ಭಾರತಕ್ಕೆ ಈ ಸ್ಥಾನ ದೊರೆತಿದೆ.
ಆಸ್ಟ್ರೇಲಿಯ ಮೂಲದ ಚಿಂತನಸಂಸ್ಥೆಯಾದ ‘ಲೊವಿ ಇನ್ಸ್ಟಿಟ್ಯೂಟ್’ ಪ್ರತಿ ವರ್ಷ ಏಶ್ಯದ ಶಕ್ತಿ ಸೂಚ್ಯಂಕವನ್ನು ಬಿಡುಗಡೆಗೊಳಿಸುತ್ತಿದ್ದ್ದು,2025ರಲ್ಲಿ 40 ಅಂಕವನ್ನು ಪಡೆಯುವ ಮೂಲಕ ಭಾರತವು ಮೊದಲ ಬಾರಿಗೆ ಪ್ರಮುಖ ಶಕ್ತಿ ಎನಿಸಿಕೊಂಡಿದೆ.
2024ರ ಏಶ್ಯ ಶಕ್ತಿ ಸೂಚ್ಯಂಕಲ್ಲಿ ಭಾರತ 38.1 ಅಂಕಗಳನ್ನು ಗಳಿಸಿ ಮಧ್ಯಮ ಶಕ್ತಿಯೆನಿಸಿಕೊಂಡಿತ್ತು. ಈ ಸಲ ಅದು 0.9ರಷ್ಟು ಅಂಕಗಳನ್ನು ಹೆಚ್ಚಿಸಿಕೊಂಡಿದೆ.
ಆಸ್ಟ್ರೇಲಿಯ ಸೇರಿದಂತೆ ಏಶ್ಯ-ಪೆಸಿಫಿಕ್ ಪ್ರದೇಶದ 27 ದೇಶಗಳ ಶಕ್ತಿಯ ಸಮೀಕ್ಷೆಯನ್ನು ನಡೆಸಿ ಲೋವಿ ಸಂಸ್ಥೆಯು ಈ ಸೂಚ್ಯಂಕವನ್ನು ಪ್ರಕಟಿಸುತ್ತದೆ.
100 ಅಂಕಗಳ ಪೈಕಿ ಅಮೆರಿಕವು 81.7 ಅಂಕಗಳನ್ನು ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, 73.7 ಅಂಕಗಳೊಂದಿಗೆ ಚೀನಾವು ಎರಡನೇ ಸ್ಥಾನ ಗಳಿಸಿದೆ. 38.8 ಅಂಕಗಳನ್ನು ಗಳಿಸಿರುವ ಜಪಾನ್ ದೇಶವು ನಾಲ್ಕನೇ ಸ್ಥಾನದಲ್ಲಿದೆ.
ಅಮೆರಿಕವು ಪಾಶ್ಚಿಮಾತ್ಯ ರಾಷ್ಟ್ರವಾಗಿದ್ದರೂ, ಏಶ್ಯಖಂಡದಲ್ಲಿ ಅದು ಗಾಢವಾದ ಪ್ರಭಾವವನ್ನು ಹೊಂದಿದೆ.ಒಂದು ದೇಶದ ಸೇನಾ ಸಾಮರ್ಥ್ಯ, ರಕ್ಷಣಾ ಜಾಲ, ಆರ್ಥಿಕ ಸಾಮರ್ಥ್ಯ, ಅಂತಾರಾಷ್ಟ್ರೀಯ ಬಾಂಧವ್ಯಗಳು, ರಾಜತಾಂತ್ರಿಕ ಪ್ರಭಾವ, ಸಾಂಸ್ಕೃತಿಕ ಪ್ರಭಾವ,ಸಂಪನ್ಮೂಲ ಹಾಗೂ ಬಿಕ್ಕಟ್ಟಿನಿಂದ ಹೊರಬರುವ ಸಾಮರ್ಥ್ಯ ಇವುಗಳನ್ನು ಆಧರಿಸಿ ಸೂಚ್ಯಂಕದಲ್ಲಿ ಅದರ ಸ್ಥಾನಮಾನವನ್ನು ಗುರುತಿಸಲಾಗುತ್ತದೆ.
ಲೊವಿ ಸೂಚ್ಯಂಕದಲ್ಲಿ 70ಕ್ಕಿಂತ ಅಧಿಕ ಅಂಕಗಳನ್ನು ಹೊಂದುವ ದೇಶಗಳಿಗೆ ಸೂಪರ್ ಪವರ್ ಸ್ಥಾನ, 40ರಿಂದ70ರೊಳಗೆ ಅಂಕ ಪಡೆದಿರುವ ದೇಶಗಳಿಗೆ ಪ್ರಮುಖ ಶಕ್ತಿ (ಮೇಜರ್ ಪವರ್) ಯ ಸ್ಥಾನ ನೀಡಲಾಗುತ್ತದೆ. ಹತ್ತಕ್ಕಿಂತ ಅಧಿಕ ಅಂಕ ಹೊಂದಿರುವ ದೇಶಗಳಿಗೆ ಮಧ್ಯಮ ಶಕ್ತಿ ಹಾಗೂ 10ಕ್ಕಿಂತ ಕಡಿಮೆ ಅಂಕ ಹೊಂದಿರುವ ದೇಶಗಳಿಗೆ ಅಲ್ಪಶಕ್ತಿ (ಮೈನರ್ ಪವರ್) ದೇಶಗಳೆಂದು ಗುರುತಿಸಲಾಗುತ್ತದೆ.
2025ರ ಸಾಲಿನಲ್ಲಿ ಭಾರತದ ಆರ್ಥಿಕ ಹಾಗೂ ಸೇನಾ ಸಾಮರ್ಥ್ಯಗಳೆರಡೂ ಅಧಿಕಗೊಂಡಿದೆ ಎಂದು ಲೊವಿ ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲದೆ ಭಾರತದ ಸೇನಾ ಸಾಮರ್ಥ್ಯವೂ ಗಣನೀಯವಾಗಿ ಸುಧಾರಣೆಗೊಂಡಿದೆ ಎಂದಿದೆ.
ಆದರೆ ಅದರ ರಕ್ಷಣಾ ಜಾಲದಲ್ಲಿ ಅದು 11 ರ್ಯಾಂಕ್ ನಲ್ಲಿದ್ದು, ಹಿಂದಿನ ಆವೃತ್ತಿಗಿಂತ ಈ ಸಲ ಇಳಿಕೆಯನ್ನು ಕಂಡಿದೆ. ರಕ್ಷಣಾ ಜಾಲದಲ್ಲಿ ಫಿಲಿಪ್ಪೀನ್ಸ್ ಹಾಗೂ ಥೈಲ್ಯಾಂಡ್ ದೇಶಗಳು ಭಾರತವನ್ನು ಹಿಂದಿಕ್ಕಿವೆ.
ಆದಾಗ್ಯೂ ರಾಜತಾಂತ್ರಿಕ ಬಾಂಧವ್ಯ ಹಾಗೂ ರಕ್ಷಣಾ ಜಾಲದಲ್ಲಿ ಭಾರತವು ಸುಧಾರಣೆಯನ್ನು ಕಂಡಿಲ್ಲವೆಂದು ಲೊವಿ ಇನ್ಸ್ಟಿಟ್ಯೂಟ್ ಹೇಳಿದೆ.
ಆರ್ಥಿಕ ಸಾಮರ್ಥ್ಯ ಹಾಗೂ ಭವಿಷ್ಯದ ಸಂಪನ್ಮೂಲ ಮಾನದಂಡಗಳಲ್ಲಿ ಭಾರತವು ತೃತೀಯ ಸ್ಥಾನ ಗಳಿಸಿದೆ. ಆರ್ಥಿಕ ಸಾಮರ್ಥ್ಯದಲ್ಲಿ ಅದು ಜಪಾನನ್ನು ಹಿಂದಿಕ್ಕಿದೆ.







