Assam | ‘ಅಸೋಮಿಯಾ ಪ್ರತಿದಿನ್’ ಕಚೇರಿ ಮೇಲಿನ ದಾಳಿಗೆ ಪತ್ರಕರ್ತರ ಸಂಘಗಳಿಂದ ಖಂಡನೆ

Photo Credit : scroll.in
ಗುವಾಹಟಿ, ಎ.12: ಅಸ್ಸಾಂನ ಪ್ರಮುಖ ದೈನಿಕ ‘ಅಸೋಮಿಯಾ ಪ್ರತಿದಿನ್’ನ ಲಖಿಂಪುರ ಕಚೇರಿಯ ಮೇಲಿನ ದಾಳಿಯನ್ನು ರಾಜ್ಯದ ಪತ್ರಕರ್ತರ ಸಂಘಗಳು ಖಂಡಿಸಿವೆ. ಬಿಜೆಪಿ ಸರಕಾರವು ಮಾಧ್ಯಮಗಳ ವಿರುದ್ಧ ವ್ಯವಸ್ಥಿತ ದಾಳಿಗಳನ್ನು ನಡೆಸುವ ಮೂಲಕ ಪತ್ರಕರ್ತರ ಸ್ವಾತಂತ್ರ್ಯಕ್ಕೆ ಬೆದರಿಕೆಯೊಡ್ಡುವ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಅವು ಆರೋಪಿಸಿವೆ.
ಅಸ್ಸಾಂ ವಿಧಾನಸಭಾ ಚುನಾವಣೆ ಮುಗಿದ 24 ಗಂಟೆಗಳಲ್ಲೇ ಶುಕ್ರವಾರ ಅಪರಿಚಿತ ವ್ಯಕ್ತಿಗಳು ಪತ್ರಿಕೆಯ ಕಚೇರಿಯ ಮೇಲೆ ದಾಳಿ ನಡೆಸಿದ್ದರು.
ದಾಳಿಯಲ್ಲಿ ಸಿಬ್ಬಂದಿಗೆ ಗಾಯವಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿರುವ ಪತ್ರಿಕೆಯು, ಘಟನೆಯನ್ನು ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲಿನ ನೇರ ದಾಳಿ ಎಂದು ಬಣ್ಣಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಗುವಾಹಟಿ ಪ್ರೆಸ್ ಕ್ಲಬ್ ಶನಿವಾರ ದಾಳಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿತು. ಮುಖ್ಯಮಂತ್ರಿಗಳಾಗಿದ್ದ ಹಿತೇಶ್ವರ ಸೈಕಿಯಾ ಮತ್ತು ಪ್ರಫುಲ್ ಕುಮಾರ್ ಮಹಂತ ಅವರ ಅಧಿಕಾರಾವಧಿಯಲ್ಲಿಯೂ ಮಾಧ್ಯಮಗಳನ್ನು ಗುರಿಯಾಗಿಸಲಾಗಿತ್ತು, ಆದರೆ ಪರಿಸ್ಥಿತಿ ಇಂದಿನಂತಿರಲಿಲ್ಲ. ಈಗಿನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಾತ್ರ ಮಾಧ್ಯಮ ಸಂಸ್ಥೆಗಳ ಮಾಲಿಕರ ಹೆಸರು, ಧರ್ಮ ಇತ್ಯಾದಿಗಳನ್ನು ಕೇಳುವ ಮೂಲಕ ಪತ್ರಕರ್ತರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಪ್ರತಿದಿನ್ ಟೈಮ್ಸ್ ಸುದ್ದಿವಾಹಿನಿಯ ಸಂಪಾದಕ ನಿತುಮೋನಿ ಸೈಕಿಯಾ ಹೇಳಿದ್ದಾರೆ.
ಒಗ್ಗಟ್ಟಾಗುವಂತೆ ಮತ್ತು ಮಾಧ್ಯಮಗಳ ಮೇಲಿನ ದಾಳಿಗಳ ವಿರುದ್ಧ ಧ್ವನಿಯೆತ್ತುವಂತೆ ಅಖಿಲ ಅಸ್ಸಾಂ ಪತ್ರಕರ್ತರ ಸಂಘದ ಅಧ್ಯಕ್ಷ ಪಂಕಜನಾಥ ಅವರು ಪತ್ರಕರ್ತರನ್ನು ಆಗ್ರಹಿಸಿದ್ದಾರೆ.
ಮಾಧ್ಯಮ ಸಂಸ್ಥೆಗಳ ಕುರಿತು ಶರ್ಮಾರ ಹೇಳಿಕೆಗಳ ಬಳಿಕ ಪತ್ರಿಕಾ ಕಚೇರಿಯ ಮೇಲೆ ದಾಳಿ ನಡೆದಿದೆ ಎಂದು ‘ಅಸೋಮಿಯಾ ಪ್ರತಿದಿನ್’ ಮತ್ತು ‘ಪ್ರತಿದಿನ್ ಟೈಮ್ಸ್’ ಒಡೆತನ ಹೊಂದಿರುವ ಪ್ರತಿದಿನ್ ಮೀಡಿಯಾ ನೆಟ್ವರ್ಕ್ ಕಳವಳ ವ್ಯಕ್ತಪಡಿಸಿದೆ.
ದಾಳಿಗೆ ಮುನ್ನ ದಿನ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಪ್ರತಿದಿನ್ ಮೀಡಿಯಾದಂತಹ ಮಾಧ್ಯಮ ಸಂಸ್ಥೆಗಳ ವಿಶ್ವಾಸಾರ್ಹತೆ ಮತ್ತು ಕಾರ್ಯವೈಖರಿಯನ್ನು ಪ್ರಶ್ನಿಸಿದ್ದ ಶರ್ಮಾ, ಅವು ತಾರತಮ್ಯವನ್ನು ತೋರಿಸುತ್ತಿವೆ ಮತ್ತು ಅವುಗಳ ವರದಿಗಾರಿಕೆ ಹಣಕಾಸು ಅಂಶಗಳಿಂದ ಪ್ರಭಾವಿತವಾಗಿದೆ ಎಂದು ಆರೋಪಿಸಿದ್ದರು ಎಂದು ನೆಟ್ವರ್ಕ್ ಹೇಳಿದೆ.
ಹಾಲಿ ಸರಕಾರವು ಅಧಿಕಾರಕ್ಕೆ ಮರಳಿದರೆ ಜಯಂತ ಬರುಹಾರಂತಹ (ಅಸೋಮಿಯಾ ಪ್ರತಿದಿನ್ ಸಂಪಾದಕ ಮತ್ತು ಪ್ರತಿದಿನ್ ಮೀಡಿಯಾ ನೆಟ್ವರ್ಕ್ ಅಧ್ಯಕ್ಷ) ಮಾಧ್ಯಮ ಪ್ರಮುಖರನ್ನು ರಾಜಕೀಯವಾಗಿ ಮತ್ತು ಬೌದ್ಧಿಕವಾಗಿ ನಾಶಗೊಳಿಸಲಾಗುವುದು ಎಂಬ ಹೇಳಿಕೆಗಳು ತೀವ್ರ ಕಳವಳಕಾರಿಯಾಗಿವೆ ಎಂದೂ ಅದು ತಿಳಿಸಿದೆ.
ಮಾಧ್ಯಮ ಸಂಸ್ಥೆಗಳೊಂದಿಗೆ ಪದೇ ಪದೇ ಸಂಘರ್ಷಗಳು ಮತ್ತು ಅವುಗಳ ವಿರುದ್ಧ ಟೀಕೆಗಳು ಅವುಗಳನ್ನು ಒತ್ತಡಕ್ಕೆ ಸಿಲುಕಿಸುವ ತಂತ್ರವಾಗಿವೆ ಎಂದು ನೆಟ್ವರ್ಕ್ ಆರೋಪಿಸಿದೆ.







