ಅಸ್ಸಾಂ| ಮುಂದುವರಿದ ತೆರವು ಕಾರ್ಯಾಚರಣೆ: ಬಂಗಾಳಿ ವಲಸಿಗರ 1,200 ಮನೆಗಳ ಧ್ವಂಸ

ಸಾಂದರ್ಭಿಕ ಚಿತ್ರ| PTI
ದಿಸ್ಪುರ, ಜ. 8: ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ ಈ ವಾರದ ಆರಂಭದಲ್ಲಿ ನಡೆಸಲಾದ ತೆರವು ಕಾರ್ಯಾಚರಣೆಯಲ್ಲಿ ಬಂಗಾಳಿ ವಲಸಿಗರ ಕುಟುಂಬಗಳ 1,200 ಮನೆಗಳನ್ನು ನಾಶಗೊಳಿಸಲಾಗಿದೆ.
ಜನವರಿ 5 ಮತ್ತು 6ರಂದು ನಡೆಸಲಾದ ತೆರವು ಕಾರ್ಯಾಚರಣೆಗಳು ಬುರಾಚಾಪೋರಿ ವನ್ಯಜೀವಿ ಅಭಯಾರಣ್ಯದೊಳಗಿನ ಸುಮಾರು 650 ಹೆಕ್ಟೇರ್ ಭೂಮಿಯಿಂದ ಅತಿಕ್ರಮಣಗಳನ್ನು ತೆರವುಗೊಳಿಸುವ ಗುರಿ ಹೊಂದಿದೆ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಜಮುಕ್ಟೋಲ್, ಅರೀಮಾರಿ, ಸಿಯಾಲೀಚರ್, ಬಾಘೇತಪು, ಗಲಾಟಿಡುಬಿ, ಲಾಠಿಮಾರಿ, ಕುಂದುಲೀಚರ್, ಪೂರ್ವ ದುಬ್ರಾಮರಿ, ಬಾಟುಲೀಚರ್ ಸೇರಿದಂತೆ ತೇಝಪುರ ಸದಾರ್ ಹಾಗೂ ಧೇಕೈಯಾಜುಲಿ ಕಂದಾಯ ವೃತ್ತದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಬಂಗಾಳಿ ವಲಸಿಗರು ವನ್ಯಜೀವಿ ಅಭಯಾರಣ್ಯದೊಳಗೆ ಮನೆಗಳನ್ನು ನಿರ್ಮಿಸಿಕೊಂಡು, ಬೆಳೆಗಳನ್ನು ಬೆಳೆಸಿದ್ದರು ಎಂದು ಆರೋಪಿಸಲಾಗಿದೆ.
ತೆರವು ಕಾರ್ಯಾಚರಣೆಗೆ ಮುನ್ನ ಹೆಚ್ಚಿನ ನಿವಾಸಿಗಳು ತಮ್ಮ ಮನೆಗಳನ್ನು ಸ್ವತಃ ಧ್ವಂಸಗೊಳಿಸಿ ಆ ಪ್ರದೇಶದಿಂದ ತೆರಳಿದರು. ಹಲವರು ಚಳಿಯಿಂದಾಗಿ ಅಲ್ಲೇ ಉಳಿದರು ಹಾಗೂ ತಮ್ಮ ಬೆಳೆಗಳನ್ನು ಕೊಯ್ಲು ಮಾಡಲು ಅವಕಾಶ ನೀಡುವಂತೆ ಅಧಿಕಾರಿಗಳಲ್ಲಿ ವಿನಂತಿಸಿದರು.
ಚಳಿಗಾಲದಲ್ಲಿ ತಮ್ಮನ್ನು ತೆರವುಗೊಳಿಸದಂತೆ ಅಲ್ಲಿನ ಜನರು ವಿನಂತಿಸಿದ್ದಾರೆ. ಆದರೆ, ಅರಣ್ಯ ಪ್ರದೇಶದಲ್ಲಿ ಅವರು ಅಕ್ರಮವಾಗಿ ವಾಸಿಸುತ್ತಿದ್ದುದರಿಂದ ಆಡಳಿತ ಕಾರ್ಯಾಚರಣೆಯಿಂದ ಅವರಿಗೆ ವಿನಾಯತಿ ನೀಡುವುದಿಲ್ಲ ಎಂದು ಸೋನಿತ್ಪುರದ ಜಿಲ್ಲಾಧಿಕಾರಿ ಆನಂದ ಕುಮಾರ್ ದಾಸ್ ತಿಳಿಸಿದ್ದಾರೆ.







