Assam | ರಾಜೀನಾಮೆ ನೀಡಿ ಕೆಲವೇ ಗಂಟೆಗಳಲ್ಲಿ ಹಿಂಪಡೆದ ಕಾಂಗ್ರೆಸ್ ನಾಯಕ ಭೂಪೇನ್ ಬೋರಾ

ಭೂಪೇನ್ ಕುಮಾರ್ ಬೋರಾ | Photo Credit : PTI
ಗುವಾಹಟಿ: ಅಸ್ಸಾಂ ಕಾಂಗ್ರೆಸ್ ನ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರು ಪಕ್ಷ ತೊರೆದು ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ತಮ್ಮ ನಿರ್ಧಾರವನ್ನು ಹಿಂಪಡೆದಿರುವ ಘಟನೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಇಂದು ಮುಂಜಾನೆ ಬೋರಾ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಮೇಲ್ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದರು. ಪಕ್ಷದ ನಾಯಕತ್ವವು ತಮ್ಮನ್ನು “ನಿರ್ಲಕ್ಷಿಸುತ್ತಿದೆ” ಹಾಗೂ ರಾಜ್ಯ ಘಟಕದಲ್ಲಿ ತಮಗೆ ಸಲ್ಲಬೇಕಾದ ಸ್ಥಾನಮಾನ ನೀಡಲಾಗುತ್ತಿಲ್ಲ ಎಂಬ ಅಸಮಾಧಾನವನ್ನು ಅವರು ಪತ್ರದಲ್ಲಿ ವ್ಯಕ್ತಪಡಿಸಿದ್ದರೆಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೋಮವಾರ ಬೆಳಿಗ್ಗೆ ರಾಜೀನಾಮೆ ಸಲ್ಲಿಸಿದ್ದ ಬೋರಾ, ಕೆಲವೇ ಗಂಟೆಗಳಲ್ಲಿ ಅದನ್ನು ಹಿಂಪಡೆದು ಪಕ್ಷದೊಂದಿಗೆ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಗೌರವ್ ಗೊಗೊಯ್, ಭನ್ವರ್ ಜಿತೇಂದ್ರ ಸಿಂಗ್ ಹಾಗೂ ಪ್ರದ್ಯುತ್ ಬೋರ್ಡೊಲೊಯ್ ಅವರು ರೈಜೋರ್ ಡೋಲ್ ಮುಖ್ಯಸ್ಥ ಅಖಿಲ್ ಗೊಗೊಯ್ ಅವರೊಂದಿಗೆ ಗುವಾಹಟಿಯಲ್ಲಿರುವ ಬೋರಾ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಪಕ್ಷದಲ್ಲಿ ಉಳಿಯುವಂತೆ ಮನವೊಲಿಸಿದ್ದರೆಂದು ತಿಳಿದುಬಂದಿದೆ.
ಬೋರಾ ಅವರ ರಾಜೀನಾಮೆ ಸುದ್ದಿ ಹರಡುತ್ತಿದ್ದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಕ್ರಿಯಿಸಿ, ಬೋರಾ ಅವರನ್ನು “ಅಸ್ಸಾಂ ಕಾಂಗ್ರೆಸ್ ನ ಕೊನೆಯ ಹಿಂದೂ ನಾಯಕ. ಮೂರು ವರ್ಷಗಳ ಹಿಂದೆ ಭೂಪೇನ್ ಬೋರಾ ಅವರನ್ನು ಸ್ವಾಗತಿಸಲು ಮತ್ತು ಅವರಿಗೆ ಸುರಕ್ಷಿತ ಸ್ಥಾನ ನೀಡಲು ನಾವು ಸಿದ್ಧರಿದ್ದೆವು. ಮಂಗಳವಾರ ಸಂಜೆ ಅವರನ್ನು ಭೇಟಿಯಾಲಿದ್ದೇನೆ”, ಎಂದು ಹೇಳಿದ್ದರು.
ಪ್ರಸ್ತುತ ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಗೌರವ್ ಗೊಗೊಯ್ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ ಹಿಮಂತ ಬಿಸ್ವ ಶರ್ಮಾ, ತಳಮಟ್ಟದ ಹಿಂದೂ ಕಾಂಗ್ರೆಸ್ ನಾಯಕರ ಅಲೆ ತಮ್ಮ ಪಕ್ಷದತ್ತ ಸಾಗುತ್ತಿದೆ. ಮುಂದಿನ ಹದಿನೈದು ದಿನಗಳಲ್ಲಿ ಸುಮಾರು ಐದು ಶಾಸಕರು ಪಕ್ಷಾಂತರಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
“ಅಸ್ಸಾಂನಲ್ಲಿ ಕಾಂಗ್ರೆಸ್ ನ ಸ್ಥಿತಿ ಭಯಾನಕವಾಗಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಮೂವರು ವೀಕ್ಷಕರು ಇಲ್ಲಿಗೆ ಬಂದಿದ್ದಾರೆ. ಅವರಿಗೆ ಅಲ್ಪಸಂಖ್ಯಾತ ಸಮುದಾಯದ ಒಬ್ಬ ಶಾಸಕರನ್ನು ನಿಯೋಜಿಸಲಾಗಿದೆ. ಅನೇಕ ಜಿಲ್ಲಾ ಕಚೇರಿಗಳಲ್ಲಿ ಸಭೆಗಳು ನಿರ್ದಿಷ್ಟ ಸಮುದಾಯದ ಧಾರ್ಮಿಕ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತಿವೆ. ಕಾಂಗ್ರೆಸ್ ವೇಗವಾಗಿ ಬದಲಾಗುತ್ತಿದೆ; ಜನರು ಅದನ್ನು ಗಮನಿಸುತ್ತಿದ್ದಾರೆ. ಭೂಪೇನ್ ಬೋರಾ ಅವರ ರಾಜೀನಾಮೆ ಕಾಂಗ್ರೆಸ್ ತನ್ನ ಕೊನೆಯ ಹಿಂದೂ ನಾಯಕನನ್ನು ಕಳೆದುಕೊಂಡಿದೆ ಎಂಬ ಸಾಂಕೇತಿಕ ಸಂದೇಶ ಹೊಂದಿದೆ” ಎಂದು ಸಿಎಂ ಶರ್ಮಾ ಹೇಳಿದರು.
2021ರಿಂದ 2025ರವರೆಗೆ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಬೋರಾ, ಕಳೆದ ವರ್ಷ ಗೌರವ್ ಗೊಗೊಯ್ ಅವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದರು. ಎರಡು ಬಾರಿ ಶಾಸಕರಾಗಿರುವ ಅವರು ಗುವಾಹಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಿಗ್ಗೆ 8 ಗಂಟೆಗೆ ಹೈಕಮಾಂಡ್ ಗೆ ಇಮೇಲ್ ಮೂಲಕ ರಾಜೀನಾಮೆ ಕಳುಹಿಸಿದ್ದಾಗಿ ಹಾಗೂ ತಮ್ಮ ನಿರ್ಧಾರದ ಹಿಂದಿನ ಕಾರಣಗಳನ್ನು ವಿವರಿಸಿದ್ದಾಗಿ ತಿಳಿಸಿದ್ದರು.
“ಇದಕ್ಕಿಂತ ಹೆಚ್ಚಿನದನ್ನು ಈಗ ಹೇಳಲು ಬಯಸುವುದಿಲ್ಲ. ಸೂಕ್ತ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿ ಎಲ್ಲಾ ವಿವರಗಳನ್ನು ನೀಡುತ್ತೇನೆ. ನಾನು ಏನನ್ನೂ ಮರೆಮಾಡುವುದಿಲ್ಲ ಮತ್ತು ರಹಸ್ಯವಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದು ಬೋರಾ ಸ್ಪಷ್ಟಪಡಿಸಿದ್ದರು. ರಾಜೀನಾಮೆ ವರದಿಗಳ ನಡುವೆಯೇ ಇತರ ಪಕ್ಷಗಳ ಹಲವಾರು ನಾಯಕರು ಅವರ ನಿವಾಸಕ್ಕೆ ಭೇಟಿ ನೀಡಿದರು. ರೈಜೋರ್ ಪಕ್ಷದ ಅಖಿಲ್ ಗೊಗೊಯ್ ಸೇರಿದಂತೆ ಅನೇಕರು ತಮ್ಮನ್ನು ಸಂಪರ್ಕಿಸಿದ್ದರೆಂದು ಅವರು ಹೇಳಿದರು.
“ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ವೈಯಕ್ತಿಕ ಕಾರಣಕ್ಕಾಗಿ ನಾನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. 32 ವರ್ಷಗಳಿಂದ ಕಾಂಗ್ರೆಸ್ ಗೆ ಸೇವೆ ಸಲ್ಲಿಸಿದ್ದೇನೆ; ಪಕ್ಷದ ಭವಿಷ್ಯದ ಬಗ್ಗೆ ನನಗೆ ಚಿಂತೆಯಿದೆ. ಹೈಕಮಾಂಡ್ ಗೆ ಕಳುಹಿಸಿದ ಪತ್ರದಲ್ಲಿ ನನ್ನ ಕಾರಣಗಳನ್ನು ವಿವರಿಸಿದ್ದೇನೆ” ಎಂದು ಹೇಳಿದರು.
ಅಸ್ಸಾಂ ಕಾಂಗ್ರೆಸ್ನೊಳಗಿನ ಭಿನ್ನಾಭಿಪ್ರಾಯದ ಲಕ್ಷಣಗಳು ಸುಮಾರು ಒಂದು ವರ್ಷ ಹಿಂದೆಯೇ ಬಹಿರಂಗವಾಗಿತ್ತು. ರಾಹುಲ್ ಗಾಂಧಿಯವರ ಆಪ್ತ ಗೌರವ್ ಗೊಗೊಯ್ ಅವರಿಗೆ ರಾಜ್ಯ ನಾಯಕತ್ವ ಹಸ್ತಾಂತರವಾದ ಬಳಿಕ ಪಕ್ಷದೊಳಗೆ ಅಸಮಾಧಾನದ ಹೊಗೆಯಾಡಿತ್ತು. ಸತತ ಎರಡು ವಿಧಾನಸಭಾ ಸೋಲುಗಳ ನಂತರ ಪಕ್ಷವನ್ನು ತಳಮಟ್ಟದಲ್ಲಿ ಪುನರ್ನಿರ್ಮಿಸಿದ್ದವರು ಬೋರಾ ಎಂಬ ಅಭಿಪ್ರಾಯವೂ ಉನ್ನತ ಮಟ್ಟದಲ್ಲಿ ಕೇಳಿ ಬಂದಿತ್ತು.
ಹೈಕಮಾಂಡ್ ಹಿಮಂತ ಬಿಸ್ವಾ ಶರ್ಮಾ ಅವರನ್ನು ಎದುರಿಸಲು ದೊಡ್ಡ ರಾಜಕೀಯ ವ್ಯಕ್ತಿತ್ವವಿರುವ ನಾಯಕನ ಅಗತ್ಯವಿದೆ ಎಂಬ ನಿಲುವಿನಿಂದ ಗೊಗೊಯ್ ಅವರನ್ನು ಮುಂದಿಟ್ಟಿತ್ತು. ಆದರೆ ಈ ಬದಲಾವಣೆ ಕಾಂಗ್ರೆಸ್ ಒಳಗೇ ಅಸಮಾಧಾನ ಹೆಚ್ಚಿಸಿತ್ತು ಎಂದು ತಿಳಿದು ಬಂದಿದೆ







