Assam | SSR ನಡಿ 2.18 ಲಕ್ಷ ಮತದಾರರ ಸೇರ್ಪಡೆ, ಒಟ್ಟು 2.51 ಕೋಟಿಗೆ ಏರಿಕೆ

Photo :ndtv
ಗುವಾಹಟಿ: ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ಎಸ್ಆರ್) ಅಡಿಯಲ್ಲಿ ಗುರುವಾರ ಅಸ್ಸಾಂನ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದೆ. ಮತದಾರರ ವಿಶೇಷ ಪರಿಷ್ಕರಣೆ (ಎಸ್ಐಆರ್) ಬಳಿಕ, ಈ ಫೆಬ್ರವರಿಯಲ್ಲಿ ಬಿಡುಗಡೆಯಾದ ಅಂತಿಮ ಮತದಾರರ ಪಟ್ಟಿಗಿಂತ 2.18 ಲಕ್ಷ ಹೆಚ್ಚಿನ ಹೆಸರುಗಳು ಸೇರ್ಪಡೆಗೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊಸ ಕರಡು ಪಟ್ಟಿಯಲ್ಲಿ ಅಸ್ಸಾಂನ ಒಟ್ಟು ಮತದಾರರ ಸಂಖ್ಯೆ 2,51,76,910 ಎಂದು ತಿಳಿಸಲಾಗಿದೆ. ಇದರಲ್ಲಿ 1,25,87,650 ಪುರುಷ ಮತದಾರರು ಹಾಗೂ 1,25,88,939 ಮಹಿಳಾ ಮತದಾರರು ಮತ್ತು 321 ಮಂದಿ ತೃತೀಯ ಲಿಂಗಿಗಳು ಸೇರಿದ್ದಾರೆ.
ಫೆ.10 ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ 2.49 ಕೋಟಿ ಮತದಾರರಿದ್ದರು.
ಪರಿಷ್ಕರಣೆಯ ಅವಧಿಯಲ್ಲಿ 4,12,344 ಹೆಸರುಗಳನ್ನು ಸೇರ್ಪಡೆಗೊಳಿಸಲಾಯಿತು. 1,93,573 ಹೆಸರುಗಳನ್ನು ಅಳಿಸಲಾಯಿತು. ಆ ನಂತರದಲ್ಲಿ 2,18,771 ಹೆಸರುಗಳು ಉಳಿದುಕೊಂಡವು.
ಇತ್ತೀಚಿನ ಪಟ್ಟಿಯಲ್ಲಿ 2,05,962 ಅಂಗವಿಕಲ ಮತದಾರರಿದ್ದು, 18-19 ವರ್ಷದ 2,87,233 ಮತದಾರರಿದ್ದಾರೆ. 85 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮತದಾರರ ಸಂಖ್ಯೆ 1,22,198 ಇದೆ.
ರಾಜ್ಯದಲ್ಲಿ ಸದ್ಯ 31,516 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಸರಾಸರಿ 799 ಮತದಾರರಿದ್ದಾರೆ. ದಲ್ಗಾಂವ್ ವಿಧಾನಸಭಾ ಕ್ಷೇತ್ರ ಅತಿಹೆಚ್ಚು ಮತದಾರರನ್ನು ಒಳಗೊಂಡಿದ್ದು, 3,25,746 ಮತದಾರರಿದ್ದಾರೆ. ಅಮ್ರಿ ಅತಿಕಡಿಮೆ ಅಂದರೆ 1,01,509 ಮತದಾರರನ್ನು ಹೊಂದಿದೆ.






