ಹಿಮಂತ ಶರ್ಮಾ ಅವರ ಫೆಲೋಶಿಪ್ ಹಿಂತೆಗೆದುಕೊಳ್ಳುವಂತೆ ಸಿಂಗಾಪುರ ಸಂಸ್ಥೆಗೆ ಅಸ್ಸಾಂ ಕಾಂಗ್ರೆಸ್ ಆಗ್ರಹ

ಹಿಮಂತ ಬಿಸ್ವಾ ಶರ್ಮಾ(PTI),ಭೂಪೇನ್ ಕುಮಾರ್ ಬೋರಾ ( X \ @BhupenKBorah)
ಗುವಾಹಟಿ : ಸಿಂಗಾಪುರದ ಲೀ ಕುವಾನ್ ಯೂ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ನೀಡಲಾದ ಫೆಲೋಶಿಪ್ ಅನ್ನು ಹಿಂತೆಗೆದುಕೊಳ್ಳುವಂತೆ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರು ಮಂಗಳವಾರ ಒತ್ತಾಯಿಸಿದ್ದಾರೆ.
ಸಿಂಗಾಪುರದ ಪಿತಾಮಹ ಲೀ ಕುವಾನ್ ಯೂ ಅವರು ತಮ್ಮ ಜೀವನದುದ್ದಕ್ಕೂ ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಸಭ್ಯತೆಯನ್ನು ಪ್ರದರ್ಶಿಸಿದ ಆದರ್ಶಪ್ರಾಯ ರಾಜನೀತಿ ತಜ್ಞ ಎಂದು ಒತ್ತಿ ಹೇಳಿದ ಬೋರಾ, ಅಸ್ಸಾಂ ಮುಖ್ಯಮಂತ್ರಿ "ಭಾರತದ ರಾಜಕೀಯದಲ್ಲಿನ ಎಲ್ಲ ತಪ್ಪುಗಳ ಪರವಾಗಿ ನಿಲ್ಲುತ್ತಾರೆ" ಎಂದು ಪ್ರತಿಪಾದಿಸಿದರು.
ಎಕ್ಸ್ ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಬೋರಾ ಅವರು ಲೀ ಕ್ವಾನ್ ಯೂ ಎಕ್ಸ್ಚೇಂಜ್ ಫೆಲೋಶಿಪ್ ಅನ್ನು ಶರ್ಮಾಗೆ ನೀಡಿರುವುದು "ಆಶ್ಚರ್ಯಕರವಾಗಿದೆ" ಎಂದು ಹೇಳಿದರು.
ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಕುರಿತ ಹಲವಾರು ಸುದ್ದಿ ವರದಿಗಳನ್ನು ಉಲ್ಲೇಖಿಸಿದ ಅವರು, ಹಿಮಂತ್ ಬಿಸ್ವಾ 'ಹಲವಾರು ಹಣಕಾಸು ಹಗರಣಗಳ ಆರೋಪಿಯಾಗಿದ್ದಾರೆ' ಮತ್ತು 'ಅಲ್ಪಸಂಖ್ಯಾತರ ವಿರುದ್ಧ ಹೆಚ್ಚು ಕೋಮುವಾದದ ಹೇಳಿಕೆಗಳನ್ನು ನೀಡುತ್ತಾರೆ' ಎಂದು ಆರೋಪಿಸಿದರು.
ಬೋರಾ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ರೂಪಮ್ ಗೋಸ್ವಾಮಿ, ಕಾಂಗ್ರೆಸ್ ನಾಯಕ ತನ್ನ ರಾಜ್ಯದ ಮುಖ್ಯಮಂತ್ರಿಯನ್ನು ಗೌರವಿಸುತ್ತಿರುವುದಕ್ಕೆ ಹೆಮ್ಮೆಪಡಬೇಕಿತ್ತು.
"ಅವರು (ಶರ್ಮಾ) ಬಿಜೆಪಿಯವರಾಗಿರಬಹುದು, ಆದರೆ ಈ ಫೆಲೋಶಿಪ್ ಮುಖ್ಯಮಂತ್ರಿಗಳಿಗೆ ಸಲ್ಲುವಂತಹದ್ದು. ಯಾವುದೇ ಪಕ್ಷದ ಸದಸ್ಯರಿಗೆ ಅಲ್ಲ. ಭೂಪೇನ್ ಬೋರಾ ಅವರು ನಕಾರಾತ್ಮಕ ವ್ಯಕ್ತಿ ಮತ್ತು ಸಕಾರಾತ್ಮಕ ಬೆಳವಣಿಗೆಯಲ್ಲೂ ನಕಾರಾತ್ಮಕ ವಿಷಯಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ" ಎಂದು ಗೋಸ್ವಾಮಿ ಹೇಳಿದ್ದಾರೆ.
ತಮ್ಮ ದೇಶದ ಅಭಿವೃದ್ಧಿಗೆ ಮತ್ತು ಸಿಂಗಾಪುರದೊಂದಿಗಿನ ದ್ವಿಪಕ್ಷೀಯ ಸಂಬಂಧಗಳಿಗೆ ಗಮನಾರ್ಹ ಸೇವೆ ವ್ಯಕ್ತಿಗಳನ್ನು ಗುರುತಿಸಿ ಈ ಫೆಲೋಶಿಪ್ ನೀಡಲಾಗುತ್ತದೆ. ಶರ್ಮಾ ಅವರು ಈ ಗೌರವಕ್ಕೆ ಪಾತ್ರರಾದ ಅಸ್ಸಾಂನ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.
ಈ ಹಿಂದೆ, ಮಾಜಿ ಕೇಂದ್ರ ಸಚಿವ ಅರುಣ್ ಶೌರಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಗೆ ಈ ಫೆಲೋಶಿಪ್ ನೀಡಲಾಗಿತ್ತು.