ಹಿಮಂತ ಬಿಸ್ವ ಶರ್ಮ ಪತ್ನಿಯ ವಿರುದ್ಧ 'ಹಲವು ಪಾಸ್ ಪೋರ್ಟ್' ಗಳನ್ನು ಹೊಂದಿರುವ ಆರೋಪ: ಪವನ್ ಖೇರಾ ನಿವಾಸಕ್ಕೆ ಬಂದ ಪೊಲೀಸರು

Photo: indiatoday
ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ಪತ್ನಿ ರಿಂಕಿ ಭುಯಾನ್ ಶರ್ಮ ಅವರು ಕಾಂಗ್ರೆಸ್ ನಾಯಕ ಪವನ್ ಖೇರಾ ವಿರುದ್ಧ ಎಫ್ಐಆರ್ ದಾಖಲಿಸಿದ ಬೆನ್ನಿಗೇ, ಅಸ್ಸಾಂ ಮತ್ತು ದಿಲ್ಲಿ ಜಂಟಿ ಪೊಲೀಸ್ ತಂಡವು ಮಂಗಳವಾರ ಅವರ ನಿವಾಸಕ್ಕೆ ತಲುಪಿತು. ಹಿಮಂತ ಬಿಸ್ವ ಶರ್ಮ ಅವರ ಪತ್ನಿ ರಿಂಕಿ ಭುಯಾನ್ ಶರ್ಮ ಮೂರು ದೇಶಗಳ ಪಾಸ್ಪೋರ್ಟ್ ಗಳನ್ನು ಹೊಂದಿದ್ದಾರೆ ಎಂಬ ಪವನ್ ಖೇರಾ ಆರೋಪದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ಪವನ್ ಖೇರಾ ಅವರ ನಿಜಾಮುದ್ದೀನ್ ನಿವಾಸಕ್ಕೆ ನಾಲ್ವರು ಸದಸ್ಯರ ಅಸ್ಸಾಂ ಪೊಲೀಸ್ ತಂಡ ಆಗಮಿಸಿತು. ಈ ಕುರಿತು ದಿಲ್ಲಿ ಪೊಲೀಸರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರಿಂದ, ದಿಲ್ಲಿ ಪೊಲೀಸರೂ ಈ ಕಾರ್ಯಾಚರಣೆಯಲ್ಲಿ ಸಹಕಾರ ನೀಡಿದರು. ಆದರೆ, ಈ ವೇಳೆ ಪವನ್ ಖೇರಾ ತಮ್ಮ ನಿವಾಸದಲ್ಲಿರಲಿಲ್ಲ. ಹೀಗಾಗಿ ಅವರು ಬರುವವರೆಗೂ ಪೊಲೀಸರ ತಂಡವು ವಿಚಾರಣೆಗಾಗಿ ಅವರ ನಿವಾಸದಲ್ಲೇ ಕಾಯುತ್ತಿತ್ತು.
ಹಿಮಂತ ಬಿಸ್ವ ಶರ್ಮ ಅವರ ಪತ್ನಿ ರಿಂಕಿ ಭುಯಾನ್ ಶರ್ಮ ಅವರು ಯುಎಇ, ಈಜಿಪ್ಟ್ ಹಾಗೂ ಅಂಟಿಗುವಾ ಮತ್ತು ಬಾರ್ಬುಡಾ ದೇಶಗಳ ಪಾಸ್ ಪೋರ್ಟ್ ಗಳನ್ನು ಹೊಂದಿದ್ದಾರೆ. ಅವರು ದುಬೈನಲ್ಲಿ ಆಸ್ತಿಪಾಸ್ತಿ ಹೊಂದಿದ್ದು, ವ್ಯೋಮಿಂಗ್ ನಲ್ಲಿ ಕಂಪನಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪವನ್ ಖೇರಾ ಆರೋಪಿಸಿದ್ದರು.
“ಭಾರತೀಯ ಕಾನೂನಿನ ಪ್ರಕಾರ, ದ್ವಿಪೌರತ್ವ ಹೊಂದಲು ಸಾಧ್ಯವಿಲ್ಲ. ಹಾಗಿದ್ದರೆ, ರಿಂಕಿ ಭುಯಾನ್ ಶರ್ಮ ಅವರು ಭಾರತೀಯ ಪಾಸ್ ಪೋರ್ಟನ್ನೂ ಹೊಂದಿದ್ದಾರೆಯೇ?” ಎಂದು ಅವರು ಪ್ರಶ್ನಿಸಿದ್ದರು.
“ಹಿಮಂತ ಬಿಸ್ವ ಶರ್ಮ ಅವರು ಅಮಿತ್ ಶಾ ಅವರ ದತ್ತು ಪುತ್ರರೇ? ಹಾಗಿದ್ದರೆ, ದೇಶದ ಗೃಹ ಸಚಿವರಿಗೆ ಅವರ ದತ್ತು ಪುತ್ರನ ಪತ್ನಿಯು ಮೂರು ಪಾಸ್ಪೋರ್ಟ್ಗಳನ್ನು ಹೊಂದಿದ್ದಾರೆ ಎಂಬ ಸಂಗತಿ ತಿಳಿದಿದೆಯೇ?” ಎಂದೂ ಅವರು ಪ್ರಶ್ನಿಸಿದರು.
ಈ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹಿಮಂತ ಬಿಸ್ವ ಶರ್ಮ ಹಾಗೂ ಅವರ ಪತ್ನಿ ರಿಂಕಿ ಭುಯಾನ್ ಶರ್ಮ, ಪವನ್ ಖೇರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಗಂಭೀರ ಕಾನೂನು ಪರಿಣಾಮಗಳ ಎಚ್ಚರಿಕೆ ನೀಡಿದ್ದಾರೆ






