Assam Flood | ಮೋಟಾರ್ ಬೋಟ್ ಇಲ್ಲ, ತರಬೇತಿಯೂ ಇಲ್ಲ: 2,000ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ 10ನೇ ತರಗತಿ ಕಲಿತ ಯುವಕ

Photo | NDTV
ಬಿಹುಬೋರ್ (ಅಸ್ಸಾಂ): ಯಾವುದೇ ಅಧಿಕೃತ ರಕ್ಷಣಾ ತರಬೇತಿಯಿಲ್ಲದ, ಮೋಟಾರ್ ಬೋಟ್ ನೆರವೂ ಇಲ್ಲದ 10ನೇ ತರಗತಿಗೆ ಶಾಲೆ ತ್ಯಜಿಸಿದ್ದ ಯುವಕನೊಬ್ಬ ಅಸ್ಸಾಂನ ಐದು ಪ್ರವಾಹ ಪೀಡಿತ ಗ್ರಾಮಗಳ ಸುಮಾರು 2,000 ಮಂದಿಯನ್ನು ರಕ್ಷಿಸಿದ್ದಾನೆ.
ಜುಲೈ 19ರ ಮುಂಜಾನೆ 3 ಗಂಟೆಗೆ ಬಿಹುಬೋರ್ ನಲ್ಲಿರುವ ದಿಖೋವ್ ನದಿಯ ಬಳಿಗೆ 25 ವರ್ಷದ ಶ್ರವಣ್ ಕುಮಾರ್ ತೆರಳಿದಾಗ, ಆತನಿಗೆ ತಾನೊಂದು ಅದ್ಭುತ ರಕ್ಷಣಾ ಕಾರ್ಯಾಚರಣೆಯ ಭಾಗವಾಗಲಿದ್ದೇನೆ ಎಂಬ ಅರಿವಿರಲಿಲ್ಲ.
ಪ್ರತಿ ಮುಂಗಾರಿನಲ್ಲೂ ಶ್ರವಣ್ ಕುಮಾರ್ ಕಟ್ಟಿಗೆಗಳನ್ನು ಸಂಗ್ರಹಿಸಲು ನದಿ ತೀರಕ್ಕೆ ಭೇಟಿ ನೀಡುತ್ತಾನೆ. ಆತನ ಕುಟುಂಬ ಎಲ್ಪಿಜಿ ಸಿಲಿಂಡರ್ ಗಳನ್ನು ಬಳಸುವುದಿಲ್ಲ. ಆದರೆ, ಜುಲೈ 19ರ ಮುಂಜಾನೆ ನದಿ ವಿಚಿತ್ರವಾಗಿ ವರ್ತಿಸಿದೆ. ಮರದ ದಿಮ್ಮಿಗಳು ಅಸಹಜ ವೇಗದೊಂದಿಗೆ ನದಿ ತೀರಕ್ಕೆ ಬಂದು ಬೀಳತೊಡಗಿವೆ. ಆಗ ಶ್ರವಣ್ ಕುಮಾರ್ ಗೆ ಅಪಾಯದ ಅರಿವಾಗಿದೆ. ಬೆಳಗಾಗುವ ಹೊತ್ತಿಗೆ ಪ್ರವಾಹದ ನೀರಿನಲ್ಲಿ ಇಡೀ ಪ್ರಾಂತ್ಯ ಮುಳುಗಿ ಹೋಗಲಿದೆ ಎಂಬುದು ಆತನಿಗೆ ಖಚಿತವಾಗಿದೆ.
ಇದರಿಂದ ಶ್ರವಣ್ ಕುಮಾರ್ ಇತರರಿಗೆ ನೆರವು ನೀಡುವ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರವಾಹದ ನೀರು ಆತನ ಮನೆಯನ್ನೂ ಬಿಟ್ಟಿಲ್ಲ. ಪ್ರವಾಹದ ನೀರು ಆತನ ಮನೆಯೊಳಗೆ ನುಗ್ಗಿದ್ದು, ಆತನ ತಾಯಿ ಮತ್ತು ಸಹೋದರ ಮನೆಯ ವಸ್ತುಗಳನ್ನು ಎತ್ತರದ ಪ್ರದೇಶಕ್ಕೆ ಸಾಗಿಸಲು ಹರಸಾಹಸ ಪಟ್ಟಿದ್ದಾರೆ. “ಒಂದು ವೇಳೆ ನಾನೇನಾದರೂ ನನ್ನ ಮನೆಯವರನ್ನು ರಕ್ಷಿಸಲು ಮರಳಿದ್ದರೆ, ಇತರರನ್ನು ರಕ್ಷಿಸಲು ಯಾರೂ ಇರಲಿಲ್ಲ” ಎಂದು ಶ್ರವಣ್ ಕುಮಾರ್ ಹೇಳಿದ್ದಾರೆ.
ಅಧಿಕೃತ ರಕ್ಷಣಾ ತರಬೇತಿಯಾಗಲಿ ಅಥವಾ ಮೋಟಾರ್ ಬೋಟ್ ಚಲಾಯಿಸುವ ತರಬೇತಿಯಾಗಲಿ ಇಲ್ಲದ 10ನೇ ತರಗತಿಗೆ ಶಾಲೆಯನ್ನು ತ್ಯಜಿಸಿದ್ದ ಶ್ರವಣ್ ಕುಮಾರ್, ಕೇವಲ ತನ್ನ ಬುದ್ದಿ ಹಾಗೂ ಸಾಂಪ್ರದಾಯಿಕ ಸ್ಥಳೀಯ ಮರದ ದೋಣಿಯನ್ನು ಮಾತ್ರ ಅವಲಂಬಿಸಿದ್ದಾರೆ. ತನ್ನ ಸ್ನೇಹಿತರ ಗುಂಪಿನೊಂದಿಗೆ ಆತ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದಾನೆ. ಆದರೆ, ಪ್ರವಾಹದ ತೀವ್ರತೆ ಎಷ್ಟಿತ್ತೆಂದರೆ, ನುರಿತ ಅಂಬಿಗರೂ ದೋಣಿಯನ್ನು ಪ್ರವೇಶಿಸಲು ಹೆದರುವಂತಹ ಪರಿಸ್ಥಿತಿ ಅದಾಗಿತ್ತು.
ಅಂದು ಬೆಳಗ್ಗೆ 10 ಗಂಟೆಯಿಂದ ಇಡೀ ದಿನ ರಾತ್ರಿಯವರೆಗೆ ದಣಿವರಿಯದೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡ ಶ್ರವಣ್ ಕುಮಾರ್ ಮತ್ತು ಸಂಗಡಿಗರು ನೀರಿನಲ್ಲಿ ಮುಳುಗಿ ಹೋಗಿದ್ದ ಮನೆಗಳಿಂದ ಮಕ್ಕಳನ್ನು ರಕ್ಷಿಸಿದ್ದಾರೆ. ವೃದ್ಧರು, ಮನೆಯ ಚಾವಣಿಯ ಮೇಲೆ ಆಶ್ರಯ ಪಡೆದಿದ್ದ ಗರ್ಭಿಣಿಯರು, ರೋಗಿಗಳನ್ನು ರಕ್ಷಿಸಿದ್ದಾರೆ.
“ರಾತ್ರಿ ಕತ್ತಲಿನಲ್ಲಿ ನಾವು ರಕ್ಷಣಾ ಕಾರ್ಯಾಚರಣೆ ಮಾಡಿದ್ದೇವೆ, ಅದು ನಮ್ಮ ಪಾಲಿಗೆ ಹೆದರಿಕೆ ಹುಟ್ಟಿಸುವಂತಿತ್ತು” ಎಂದು ಅವರು ಹೇಳಿದ್ದಾರೆ.
ದೋಣಿ ಮಗುಚಿ ಬೀಳುವ ಅಪಾಯದ ನಡುವೆಯೂ ಗ್ರಾಮದಿಂದ ಗ್ರಾಮಕ್ಕೆ, ಮನೆಯಿಂದ ಮನೆಗೆ ತೆರಳಿರುವ ಶ್ರವಣ್ ಕುಮಾರ್ ಮತ್ತು ಸಂಗಡಿಗರು ಸುಮಾರು 2,000 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 19ರಂದು ಸಂಭವಿಸಿದ ಪ್ರವಾಹದಲ್ಲಿ ಶಿವಾಸ್ ನಗರದ ಸಹ ನಗರ ನಝೀರಾದಲ್ಲಿ ವ್ಯಾಪಕ ಪ್ರಮಾಣದ ಹಾನಿಯುಂಟಾಗಿದೆ. ಗ್ರಾಮಗಳು ಮುಳುಗಿ ಹೋಗಿದ್ದು, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ವಿದ್ಯುತ್ ಹಾಗೂ ದೂರವಾಣಿ ಸಂಪರ್ಕಗಳು ಕಡಿತಗೊಂಡಿದೆ.






