ಕಾಂಗ್ರೆಸ್ ಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ಅಸ್ಸಾಂ ಸರಕಾರ ಜನರಿಗೆ ಬೆದರಿಕೆ ಒಡ್ಡುತ್ತಿದೆ: ರಾಹುಲ್ ಗಾಂಧಿ
Photo Credit: PTI
ದಿಸ್ಪುರ: ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯಲ್ಲಿ ಪಾಲ್ಗೊಳ್ಳದಂತೆ ಅಸ್ಸಾಂನ ಬಿಜೆಪಿ ನೇತೃತ್ವದ ಸರಕಾರ ಜನರಿಗೆ ಬೆದರಿಕೆ ಒಡ್ಡುತ್ತಿದೆ ಹಾಗೂ ಯಾತ್ರೆಯ ದಾರಿಯುದ್ದಕ್ಕೂ ಕಾರ್ಯಾಕ್ರಮಕ್ಕೆ ಅನುಮತಿ ನಿರಾಕರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಆರೋಪಿಸಿದ್ದಾರೆ.
ಬಿಸ್ವನಾಥ್ ಜಿಲ್ಲಾ ಕೇಂದ್ರವಾದ ಬಿಸ್ವನಾಥ್ ಚರಿಯಾಲಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು.
‘‘ಯಾತ್ರೆಯ ಭಾಗವಾಗಿ ನಾವು ದೀರ್ಘ ಭಾಷಣ ಮಾಡುವುದಿಲ್ಲ. ನಾವು ಪ್ರತಿ ದಿನ 7-8 ಗಂಟೆ ಪ್ರಯಾಣಿಸುತ್ತೇವೆ. ನಿಮ್ಮ ಸಮಸ್ಯೆಗಳನ್ನು ಆಲಿಸುತ್ತೇವೆ. ನಿಮ್ಮ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುವುದು ನಮ್ಮ ಗುರಿ’’ ಎಂದು ಅವರು ಹೇಳಿದರು.
ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ಜನರಿಗೆ ಬೆದರಿಕೆ ಒಡ್ಡಲಾಗುತ್ತಿದೆ ಹಾಗೂ ಯಾತ್ರೆಯ ದಾರಿಯಲ್ಲಿ ಕಾರ್ಯಕ್ರಮ ಆಯೋಜಿಸುವುದಕ್ಕೆ ಅನುಮತಿ ನಿರಾಕರಿಸಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ನ ಬ್ಯಾನರ್ ಹಾಗೂ ಬಾವುಟಗಳಿಗೆ ಹಾನಿ ಉಂಟು ಮಾಡಲಾಗಿದೆ ಎಂದು ಅವರು ಆರೋಪಿಸಿದರು.
‘‘ಜನರನ್ನು ಹತ್ತಿಕ್ಕಬಹುದು ಎಂದು ಅವರು (ಸರಕಾರ)ಭಾವಿಸಿದ್ದಾರೆ. ಆದರೆ, ಅವರು ಇದು ರಾಹುಲ್ ಗಾಂಧಿ ಅವರ ಯಾತ್ರೆ ಅಲ್ಲ. ಇದು ಜನರ ಧ್ವನಿಗಾಗಿ ಯಾತ್ರೆ ಎಂಬುದನ್ನು ಅರಿತುಕೊಂಡಿಲ್ಲ’’ ಎಂದು ಅವರು ಹೇಳಿದ್ದಾರೆ.
‘‘ರಾಹುಲ್ ಗಾಂಧಿಯಾಗಲಿ, ಅಸ್ಸಾಂನ ಜನರಾಗಲಿ ನಿಮಗೆ ಹೆದರುವುದಿಲ್ಲ. ನೀವು ಏನು ಮಾಡಲು ಬಯಸುತ್ತಿರೋ ಅದನ್ನು ಮಾಡಿ. ಚುನಾವಣೆ ಬಂದಾಗ ಕಾಂಗ್ರೆಸ್ ಬಿಜೆಪಿಯನ್ನು ಅತ್ಯಧಿಕ ಅಂತರದಿಂದ ಸೋಲಿಸಲಿದೆ’’ ಎಂದು ರಾಹುಲ್ ಗಾಂಧಿ ಹೇಳಿದರು.