Assam | ಗುವಾಹಟಿ ಹೋಟೆಲ್ ನಲ್ಲಿ ಗುಂಡಿನ ದಾಳಿ: ಐವರು ಮೃತ್ಯು
ಹೋಟೆಲ್ ಮಾಲೀಕ–ಗುತ್ತಿಗೆದಾರನ ನಡುವಿನ ಆಸ್ತಿ ವಿವಾದವೇ ಕೃತ್ಯಕ್ಕೆ ಕಾರಣ; ಓರ್ವನಿಗೆ ಗಂಭೀರ ಗಾಯ

Photo: screengrab/x.com/ViralVolT1
ಗುವಾಹಟಿ: ಹೋಟೆಲ್ ನ ಗುತ್ತಿಗೆ ಒಪ್ಪಂದಕ್ಕೆ ಸಂಬಂಧಿಸಿದ ಆಸ್ತಿ ವಿವಾದ ವಿಕೋಪಕ್ಕೆ ತಿರುಗಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಸ್ಸಾಂನ ಗುವಾಹಟಿಯ ಬೋರಾ ಸರ್ವಿಸ್ ಪ್ರದೇಶದಲ್ಲಿರುವ ‘ಹೋಟೆಲ್ ಬಿಲಾಸ್ ಇನ್’ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಹೋಟೆಲ್ ಮಾಲೀಕ ಮತ್ತು ಅದನ್ನು ಗುತ್ತಿಗೆಗೆ ಪಡೆದ ವ್ಯಕ್ತಿಯ ನಡುವಿನ ವಿವಾದವೇ ಗುಂಡಿನ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್ ಅನ್ನು ಗುತ್ತಿಗೆಗೆ ಪಡೆದ ವ್ಯಕ್ತಿಯೇ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
‘ಆರು ಮಂದಿಗೆ ಗುಂಡೇಟು ತಗುಲಿದ್ದು, ಅವರಲ್ಲಿ ಐವರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಬಳಸಲಾದ .32 ಬೋರ್ ನ ಪರವಾನಗಿ ಹೊಂದಿರುವ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಹೋಟೆಲ್ನ ಗುತ್ತಿಗೆ ಒಪ್ಪಂದಕ್ಕೆ ಸಂಬಂಧಿಸಿದ ಆಸ್ತಿ ವಿವಾದವೇ ಘಟನೆಗೆ ಕಾರಣ’ ಎಂದು ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಂತ ಸುದ್ದಿಗಾರರಿಗೆ ತಿಳಿಸಿದರು.
‘ಮೃತರೆಲ್ಲರೂ ಹೋಟೆಲ್ ಮಾಲೀಕರ ಕಡೆಯವರು. ಗುತ್ತಿಗೆದಾರನೇ ಗುಂಡು ಹಾರಿಸಿದ್ದಾನೆ’ ಎಂದು ಅವರು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಗುಂಡಿನ ದಾಳಿಯ ಹಿಂದಿನ ನಿಖರ ಕಾರಣ ಮತ್ತು ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ.






