ಎಟಿಎಫ್ ದರ ಶೇ 10 ಹೆಚ್ಚಳ: ವಿಮಾನ ಪ್ರಯಾಣ ದುಬಾರಿ?

ಸಾಂದರ್ಭಿಕ ಚಿತ್ರ Photo : magnific
ಹೊಸದಿಲ್ಲಿ: ಹೊಸ ಬೆಲೆ ಸ್ಥಿರೀಕರಣ ವ್ಯವಸ್ಥೆಯಡಿ ತೈಲ ಮಾರಾಟ ಕಂಪನಿಗಳು ವಿಮಾನ ಇಂಧನ (ಏವಿಯೇಷನ್ ಟರ್ಬೈನ್ ಫ್ಯೂಯಲ್) ದರವನ್ನು ಶೇಕಡ 10ರಷ್ಟು ಹೆಚ್ಚಿಸಿದ್ದು, ಇದು ವಿಮಾನಯಾನ ದರ ಏರಿಕೆಗೆ ಕಾರಣವಾಗಲಿದೆ. ಎಟಿಎಫ್ ಬೆಲೆ ಮುಂದಿನ ಮೂರು ವರ್ಷಗಳ ಕಾಲ ಈ ವ್ಯವಸ್ಥೆಯಡಿ ಸ್ಥಿರವಾಗಿರುತ್ತವೆ. ದೇಶಿ ವಿಮಾನಯಾನ ಕಂಪನಿಗಳಿಗೆ ಪ್ರತಿ ಲೀಟರ್ ಎಟಿಎಫ್ ದರ 105 ರೂಪಾಯಿಯಿಂದ 115 ರೂಪಾಯಿಗೆ ಹೆಚ್ಚಳವಾಗಿದೆ.
ವಿಮಾನ ಕಾರ್ಯಾಚರಣೆ ದರದ ಶೇಕಡ 60ರಷ್ಟು ಪಾಲು ಇಂಧನಕ್ಕೆ ವೆಚ್ಚವಾಗುವ ಹಿನ್ನೆಲೆಯಲ್ಲಿ ಎಟಿಎಫ್ ಬೆಲೆ ಹೆಚ್ಚಳದಿಂದಾಗಿ ವಿಮಾನಯಾನ ದುಬಾರಿಯಾಗುವ ನಿರೀಕ್ಷೆ ಇದೆ. ರೂಪಾಯಿ ಮೌಲ್ಯ ಕುಸಿತ ಹಾಗೂ ಇಂಧನ ದರ ಹೆಚ್ಚಳದಿಂದಾಗಿ ವಿಮಾನಯಾನ ಕಂಪನಿಗಳು ಒತ್ತಡ ಎದುರಿಸುತ್ತಿದ್ದು, ವಿಮಾನಯಾನ ಸೇವೆಯನ್ನು ಕೂಡಾ ಕಡಿತಗೊಳಿಸುತ್ತಿವೆ.
ಜಾಗತಿಕ ಮಟ್ಟದಲ್ಲಿ ತೈಲ ಬೆಲೆಯಲ್ಲಿ ತೀವ್ರ ಏರುಪೇರಾದಾಗ ಕೂಡಾ ವಿಮಾನಯಾನ ಕಂಪನಿಗಳು ಹಾಗೂ ಪ್ರಯಾಣಿಕರಿಗೆ ಬಿಸಿ ತಟ್ಟಬಾರದು ಎಂಬ ಉದ್ದೇಶದಿಂದ ಬೆಲೆ ಸ್ಥಿರೀಕರಣ ವ್ಯವಸ್ಥೆ ರೂಪಿಸಲಾಗಿದೆ. ಕೇಂದ್ರ ಸರ್ಕಾರ ಕಳೆದ ವಾರ ಘೋಷಿಸಿದ ಈ ವ್ಯವಸ್ಥೆ 10,000 ಕೋಟಿ ರೂಪಾಯಿಯ ಯೋಜನೆಯಾಗಿದ್ದು, ಇದು ಐಚ್ಛಿಕವಾಗಿರುತ್ತದೆ. ವಿಮಾನಯಾನ ಕಂಪನಿಗಳು ಹೊಸ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳದಿದ್ದಲ್ಲಿ ಮಾರುಕಟ್ಟೆ ಸಂಪರ್ಕಿತ ದರದಲ್ಲೇ ಖರೀದಿ ಮಾಡಬಹುದಾಗಿದೆ. ಪ್ರಸ್ತುತ ಇದು ಅಂತರರಾಷ್ಟ್ರೀಯ ವಿಮಾನಯಾನ ಕಂಪನಿಗಳು ಪಾವತಿಸುವುದಕ್ಕೆ ಸಮಾನವಾಗಿ 142 ರೂಪಾಯಿ ಆಗಿರುತ್ತದೆ.
ಮೂರು ವರ್ಷದ ದೀರ್ಘಾವಧಿಗಾಗಿ ಈ ಹೊಸ ವ್ಯವಸ್ಥೆಯಡಿ ಬೆಲೆ ನಿರ್ಧರಿಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶಕ ರೋಹಿತ್ರಾಜ್ ಪ್ರಕಟಿಸಿದ್ದರು. ಈ ಯೋಜನೆಯಡಿ, ತೈಲ ಮಾರಾಟ ಕಂಪನಿಗಳು ಬೆಲೆ ಏರಿಕೆಯ ಹೊರೆಯನ್ನು ಭಾರತೀಯ ವಿಮಾನಯಾನ ಕಂಪನಿಗಳಿಗೆ ವರ್ಗಾಯಿಸಿದಂತೆ ಸರ್ಕಾರವು ಬಡ್ಡಿರಹಿತ ಮುಂಗಡವನ್ನು ತೈಲ ಮಾರಾಟ ಕಂಪನಿಗಳಿಗೆ ನೀಡಲಿದೆ.






