ಇವಿಎಂ ತೆರೆಯುವ ಪ್ರಯತ್ನ: ಟಿಎಂಸಿ ಆರೋಪ

ಮಮತಾ ಬ್ಯಾನರ್ಜಿ Photo: PTI
ಕೊಲ್ಕತ್ತಾ: ಕೇಂದ್ರ ಕೊಲ್ಕತ್ತಾದ ಖುದಿರಾಮ್ ಅನುಶೀಲನ ಕೇಂದ್ರದಲ್ಲಿ ಏಳು ಉತ್ತರ ಹಾಗೂ ಪೂರ್ವ ಕೊಲ್ಕತ್ತಾ ವಿಧಾನಸಭಾ ಕ್ಷೇತ್ರಗಳ ಮತಗಳ ಎಣಿಕೆಗೆ ವ್ಯವಸ್ಥೆ ಮಾಡಲಾಗಿದ್ದು, ಈ ಎಣಿಕೆ ಕೇಂದ್ರ ಗುರುವಾರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಸಂಘರ್ಷಕ್ಕೆ ವೇದಿಕೆಯಾಗಿ ಮಾರ್ಪಟ್ಟಿತು.
ಅಪರಿಚಿತ ವ್ಯಕ್ತಿಗಳು ಮತಯಂತ್ರಗಳನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಷ ಆಪಾದಿಸಿದ್ದು, ಸ್ಟ್ರಾಂಗ್ ರೂಮ್ಗಳಿಗೆ ಈ ವ್ಯಕ್ತಿಗಳು ಪ್ರವೇಶಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪಕ್ಷ ಹೇಳಿದೆ.
ಇವಿಎಂ ಹಾಗೂ ಅಂಚೆ ಮತಪತ್ರಗಳನ್ನು ತಿರುಚಲಾಗಿದೆ ಎಂಬ ಆರೋಪವನ್ನು ಸಿಇಓ ಮನೋಜ್ ಅಗರ್ವಾಲ್ ತಳ್ಳಿಹಾಕಿದ್ದಾರೆ. "ಈ ಬಗ್ಗೆ ಯಾವುದೇ ಸಂಶಯ ಇಲ್ಲ. ಭದ್ರತಾ ಕೊಠಡಿಗೆ ಮೂರು ಹಂತಗಳ ಭದ್ರತೆ ಒದಗಿಸಲಾಗಿದೆ. ಅಧಿಕೃತ ಅಧಿಕಾರಿಗಳನ್ನು ಹೊರತುಪಡಿಸಿ ಇತರ ಯಾರೂ ಒಳಗೆ ಪ್ರವೇಶಿಸುವಂತಿಲ್ಲ" ಎಂದು ಅವರು ಪ್ರತಿಪಾದಿಸಿದ್ದಾರೆ.
ಟಿಎಂಸಿ ಅಭ್ಯರ್ಥಿಗಳಾದ ಶಶಿ ಪಾಂಜಾ ಹಾಗೂ ಕುನಾಲ್ ಘೋಷ್ ರಸ್ತೆ ಬದಿ ಪ್ರತಿಭಟನೆ ನಡೆಸಿದರೆ, ಸಿಎಂ ಮಮತಾ ಅವರು ಭವಾನಿಪುರ ಕ್ಷೇತ್ರದ ಮತಪೆಟ್ಟಿಗೆಗಳನ್ನು ಇರಿಸಲಾದ ಶೇಖಾವತ್ ಸ್ಮಾರಕ ಹೈಸ್ಕೂಲ್ನಲ್ಲಿ ಠಿಕಾಣಿ ಹೂಡಿದ್ದಾರೆ. ಭವಾನಿಪುರ ಕ್ಷೇತ್ರದಲ್ಲಿ ಮಮತಾ, ಬಿಜೆಪಿಯ ಸುವೇಂಧು ಅಧಿಕಾರಿ ಅವರನ್ನು ಎದುರಿಸುತ್ತಿದ್ದಾರೆ. ಕೊಲ್ಕತ್ತಾ ಪೊಲೀಸರು ಭದ್ರತಾ ಕೊಠಡಿಯ ಸುತ್ತ ಸರ್ಪಗಾವಲು ಇರಿಸಿದ್ದಾರೆ.
ಮೇ 4ರವರೆಗೆ ಪಕ್ಷದ ಎಲ್ಲ 294 ಅಭ್ಯರ್ಥಿಗಳು ಇವಿಎಂ ಯಂತ್ರಗಳನ್ನು ಇರಿಸಲಾದ ಕೇಂದ್ರಗಳ ಮೇಲೆ ಹದ್ದಿನ ಕಣ್ಣು ಇಡಬೇಕು ಎಂದು ಸೂಚನೆ ನೀಡಿರುವ ಮಮತಾ, ಮತಯಂತ್ರಗಳನ್ನು ತಿರುಚುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಖುದಿರಾಮ್ ಅನುಶೀಲನ ಕೇಂದ್ರಕ್ಕೆ ಅಪರಿಚಿತರು ನುಗ್ಗಿದ್ದಾರೆ ಎನ್ನಲಾದ ಸಿಸಿಟಿವಿ ದೃಶ್ಯಾವಳಿಯನ್ನು ಟಿಎಂಸಿ ಬಿಡುಗಡೆ ಮಾಡಿದ ಬಳಿಕ ಉದ್ವಿಗ್ನತೆ ಹೆಚ್ಚಿದೆ.
ಅಂಚೆ ಮತಪತ್ರಗಳನ್ನು ಕೂಡ ತಿರುಚಲಾಗಿದೆ ಎಂದು ಟಿಎಂಸಿಯ ಘೋಷ್ ಆಪಾದಿಸಿದ್ದಾರೆ. ಈ ಆರೋಪದ ಬೆನ್ನಲ್ಲೇ ಕೊಲ್ಕತ್ತಾ ಉತ್ತರ ಚುನಾವಣಾ ಅಧಿಕಾರಿ ಸ್ಮಿತಾ ಪಾಂಡೆ ಎಣಿಕೆ ಕೇಂದ್ರಕ್ಕೆ ಹಿರಿಯ ಅಧಿಕಾರಿಗಳ ಜತೆ ಭೇಟಿ ನೀಡಿ ಘೋಷ್ ಹಾಗೂ ಪಾಂಜಾ ಅವರೊಂದಿಗೆ ಚರ್ಚಿಸಿದರು.






